Home Uncategorized ಬ್ಯಾಲನ್ ಡಿ’ಓರ್| ಸಾಕ್ರಟೀಸ್ ಪ್ರಶಸ್ತಿ ಗೆದ್ದ ಸಾದಿಯೊ ಮಾನೆ, ಮ್ಯಾಂಚೆಸ್ಟರ್‌ ಸಿಟಿ ʻವರ್ಷದ ಕ್ಲಬ್‌ʼ

ಬ್ಯಾಲನ್ ಡಿ’ಓರ್| ಸಾಕ್ರಟೀಸ್ ಪ್ರಶಸ್ತಿ ಗೆದ್ದ ಸಾದಿಯೊ ಮಾನೆ, ಮ್ಯಾಂಚೆಸ್ಟರ್‌ ಸಿಟಿ ʻವರ್ಷದ ಕ್ಲಬ್‌ʼ

ಫ್ರಾನ್ಸ್‌ ಫುಟ್ಬಾಲ್‌ ಮ್ಯಾಗಝಿನ್‌ʼ ನೀಡುವ ಪ್ರತಿಷ್ಠಿತ ಬ್ಯಾಲನ್ ಡಿ’ಓರ್‌ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಪ್ಯಾರಿಸ್‌ನ ಚಾಟೆಲೆಟ್ ಥಿಯೇಟರ್‌ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ಫ್ರಾನ್ಸ್‌ ಆಟಗಾರ ಕರೀಮ್ ಬೆಂಝಿಮಾ, ಮೊದಲ ಬಾರಿಗೆ  ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದರು. ಮಹಿಳಾ ವಿಭಾಗದಲ್ಲಿ ಬಾರ್ಸಿಲೋನಾ ತಂಡದ ಅಲೆಕ್ಸಿಯಾ ಪುಟೆಲ್ಲಾಸ್‌ ಸತತ ಎರಡನೇ ಬಾರಿಗೆ ಬ್ಯಾಲನ್ ಡಿ’ಓರ್‌ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.

ವರ್ಷದ ಕ್ಲಬ್‌: ಮ್ಯಾಂಚೆಸ್ಟರ್‌ ಸಿಟಿ

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಚಾಂಪಿಯನ್‌ ಮ್ಯಾಂಚೆಸ್ಟರ್‌ ಸಿಟಿ ತಂಡವು ವರ್ಷದ ಕ್ಲಬ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಲಿವರ್‌ಪೂಲ್‌ ಎರಡನೇ ಮತ್ತು ಚಾಂಪಿಯನ್ಸ್‌ ಲೀಗ್‌, ಲಾ ಲೀಗ್‌ ಚಾಂಪಿಯನ್‌ ತಂಡ ರಿಯಲ್‌ ಮ್ಯಾಡ್ರಿಡ್‌ ಅಚ್ಚರಿ ಎಂಬಂತೆ ಮೂರನೇ ಸ್ಥಾನಕ್ಕೆ ಹಿಂಬಡ್ತಿ ಪಡೆಯಿತು.

ಸಾಕ್ರಟೀಸ್ ಪ್ರಶಸ್ತಿʼ: ಸಾದಿಯೋ ಮಾನೆ

ಬ್ಯಾಲನ್ ಡಿ’ಓರ್‌ನಲ್ಲಿ ಈ ವರ್ಷ ಮೊದಲ ಬಾರಿಗೆ ಪರಿಚಯಿಸಲಾದ ʻಸಾಕ್ರಟೀಸ್ ಪ್ರಶಸ್ತಿʼ, ಬಯಾರ್ನ್‌ ಮ್ಯೂನಿಚ್‌ನ ಮುಂಚೂಣಿ ಆಟಗಾರ ಸಾದಿಯೋ ಮಾನೆ ಅವರಿಗೆ ಒಲಿಯಿತು. ತಮ್ಮ ಹುಟ್ಟೂರಾದ ಸೆನೆಗಲ್‌ನ ಕ್ಯಾಸಮಾನ್ಸ್‌ನಲ್ಲಿ ಶಾಲೆಗಳು, ಆಸ್ಪತ್ರೆ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಲು ಮಾನೆ, ತಮ್ಮ ಆದಾಯದ ಬಹುಪಾಲು ಮೊತ್ತವನ್ನು ವ್ಯಯಿಸುತ್ತಿದ್ದಾರೆ. 30 ವರ್ಷ ವಯಸ್ಸಿನ ಮಾನೆ ಅವರ ಈ ಮಾನವೀಯ ಸೇವೆಯನ್ನು ಗುರುತಿಸಿ ಚೊಚ್ಚಲ ʻಸಾಕ್ರಟೀಸ್ ಪ್ರಶಸ್ತಿʼ ನೀಡಿ ಗೌರವಿಸಲಾಯಿತು. ಆಫ್ರಿಕನ್ ವರ್ಷದ ಆಟಗಾರ ಪ್ರಶಸ್ತಿ ವಿಜೇತ ಮಾನೆ, ಮಕ್ಕಳ ಸಹಾಯ ಸಂಸ್ಥೆ ʻರೈಟ್ ಟು ಪ್ಲೇʼಗೆ ಜಾಗತಿಕ ರಾಯಭಾರಿಯಾಗಿದ್ದಾರೆ.

2011ರಲ್ಲಿ ನಿಧನರಾದ ಮಾಜಿ ಬ್ರೆಜಿಲ್ ಅಂತರರಾಷ್ಟ್ರೀಯ ಆಟಗಾರನ ಹೆಸರಿನಲ್ಲಿ ಸಾಕ್ರಟೀಸ್ ಪ್ರಶಸ್ತಿ ಆರಂಭಿಸಲಾಗಿದೆ. ಬ್ರೆಜಿಲ್‌ನಲ್ಲಿ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಬಂಡಾಯ ಸಾರಿದ್ದ ಸಾಕ್ರಟೀಸ್, 1980 ರ ದಶಕದಲ್ಲಿ ಸಾಮಾಜಿಕ ಬದಲಾವಣೆಗಾಗಿ ಹೋರಾಟದಲ್ಲಿ ಸಕ್ರೀಯವಾಗಿದ್ದರು.

Join Whatsapp
Exit mobile version