ಬೆಂಗಳೂರು: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಅವರು ಅನುಮಾನಾಸ್ಪದವಾಗಿ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಶರಣಾಗಿರುವ ಸ್ವಾಮೀಜಿಗೆ 45 ವರ್ಷ ವಯಸ್ಸಾಗಿತ್ತು. ಸ್ವಾಮೀಜಿಯು ಬಂಡೇಮಠದ ಬೆಟ್ಟದ ಮೇಲಿನ ಮನೆಯ ಕಿಟಕಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಮಠದ ತಮ್ಮ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಡೆತ್ ನೋಟ್ ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಕೆಲವರಿಂದ ಬೆದರಿಕೆ ಕರೆಗಳು ಸಹ ಬಂದಿವೆ ಎಂದು ಉಲ್ಲೇಖಿಸಿದ್ದಾರೆ.
ಮಾಗಡಿ ತಾಲೂಕಿನಲ್ಲೇ ದೊಡ್ಡ ಮಠ ಎಂಬ ಪ್ರಖ್ಯಾತಿ ಪಡೆದಿರುವ ಕಂಚುಗಲ್ ಬಂಡೆಮಠದ ಆವರಣದಲ್ಲಿ ಶಾಲಾ ಕಾಲೇಜುಗಳಿವೆ. 50 ಕೋಟಿಗೂ ಹೆಚ್ಚು ಮೌಲ್ಯ ಹೊಂದಿರುವ ಈ ಮಠದ ಸ್ವಾಮೀಜಿ ಬಸವಲಿಂಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ವಾಮೀಜಿ ನಿಧನ ಹಿನ್ನೆಲೆಯಲ್ಲಿ ಹಲವು ಮಠಾಧೀಶರು ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇನ್ನು ಡೆತ್ ನೋಟ್ ನಲ್ಲಿರುವ ಕೆಲವು ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಕೆಲ ವೈಯಕ್ತಿಕ ಕಾರಣಗಳಿಂದ ಬೇಸತ್ತು ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಪೋಲಿಸರ ತನಿಖೆ ನಂತರ ಸತ್ಯ ಬಯಲಾಗಲಿದೆ.
ಬಸವಲಿಂಗ ಸ್ವಾಮೀಜಿಯವರು ಚನ್ನಮಲ್ಲಯ್ಯ, ಪುಟ್ಟಗೌರಮ್ಮರ ಎಂಟನೇ ಪುತ್ರರಾಗಿದ್ದಾರೆ. ಶ್ರೀಗಳು ಸೇರಿದಂತೆ 5 ಮಂದಿ ಗಂಡು, 3 ಮಂದಿ ಹೆಣ್ಣು ಮಕ್ಕಳಿದ್ದಾರೆ. 1 ರಿಂದ 8 ನೇ ತರಗತಿಯವರೆಗೂ ಬಂಡೇಮಠದಲ್ಲೇ ವಿದ್ಯಾಭ್ಯಾಸ ಮಾಡಿದ ನಂತರ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ, ಸ್ವಾಮೀಜಿಗಳ ಹೆಸರಲ್ಲಿ 80 ಎಕರೆ ಜಮೀನು ಇದೆ.
ಕುದೂರು ಪೊಲೀಸ್ ಇನ್ಸ್ ಪೆಕ್ಟರ್ ಎ.ಪಿ. ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿರಾರು ಮಂದಿ ಭಕ್ತರು ಮಠದ ಬಳಿ ಜಮಾಯಿಸಿದ್ದಾರೆ.