ನವದೆಹಲಿ: ಭಾರತದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ನೀರವ್ ಮೋದಿ ಅವರ ಸಹೋದರ ನೇಹಲ್ ಮೋದಿಯನ್ನು ಅಮೆರಿಕ ಅಧಿಕಾರಿಗಳು ಜುಲೈ 4ರಂದು ಬಂಧಿಸಿದ್ದಾರೆ.
ಭಾರತದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಸಲ್ಲಿಸಿದ ಜಂಟಿ ಹಸ್ತಾಂತರ ವಿನಂತಿಯ ಬಳಿಕ ನೇಹಲ್ ಮೋದಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕ ನ್ಯಾಯ ಇಲಾಖೆ ಭಾರತೀಯ ಅಧಿಕಾರಿಗಳಿಗೆ ತಿಳಿಸಿದೆ.
ಅಮೆರಿಕದ ಪ್ರಾಸಿಕ್ಯೂಷನ್ ಸಲ್ಲಿಸಿದ ದೂರಿನ ಪ್ರಕಾರ, 2 ಗಂಭೀರ ಆರೋಪಗಳ ಮೇಲೆ ಹಸ್ತಾಂತರ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುತ್ತಿದೆ. ಅವರ ಗಡೀಪಾರು ಕೋರಿಕೆಯ ನಂತರ ಇದು ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಗೆಲುವಾಗಿದೆ.
PNB ವಂಚನೆ ಪ್ರಕರಣದಲ್ಲಿ ನೇಹಲ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಭಾರತದ ಅತಿದೊಡ್ಡ ಬ್ಯಾಂಕಿಂಗ್ ಹಗರಣಗಳಲ್ಲಿ ಒಂದಾದ ಬಹುಕೋಟಿ ಡಾಲರ್ ಮೌಲ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವಂಚನೆ ಪ್ರಕರಣದಲ್ಲಿ ನೇಹಲ್ ಮೋದಿ ಪ್ರಮುಖ ಆರೋಪಿ. ಯುಕೆಯಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಎದುರಿಸುತ್ತಿರುವ ತನ್ನ ಸಹೋದರ ನೀರವ್ ಮೋದಿಗೆ ಅಪರಾಧದ ಆದಾಯವನ್ನು ಅಕ್ರಮವಾಗಿ ವರ್ಗಾಯಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಭಾರತೀಯ ಏಜೆನ್ಸಿಗಳು ಆರೋಪಿಸಿವೆ.
ವರದಿಗಳ ಪ್ರಕಾರ, ಪರಾರಿಯಾದ ವಜ್ರ ವ್ಯಾಪಾರಿ ನೀರವ್ ಮೋದಿಯ ಕಿರಿಯ ಸಹೋದರ ನೇಹಲ್ ಮೋದಿಯನ್ನು ಸಿಬಿಐ ಮತ್ತು ಇಡಿ ಗಡೀಪಾರು ಕೋರಿಕೆಯ ಮೇರೆಗೆ ಅಮೆರಿಕದಲ್ಲಿ ಬಂಧಿಸಲಾಗಿದೆ. ಮ್ಯಾನ್‌ಹ್ಯಾಟನ್‌ನಲ್ಲಿರುವ ವಿಶ್ವದ ಅತಿದೊಡ್ಡ ವಜ್ರ ಸಂಸ್ಥೆಗಳಲ್ಲಿ ಒಂದಾದ ಎಲ್‌ಡಿ ಡೈಮಂಡ್ಸ್ ಯುಎಸ್‌ಎಯಿಂದ $2.6 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ವಜ್ರಗಳನ್ನು ಸ್ವಾಧೀನಪಡಿಸಿಕೊಂಡ ಆರೋಪದ ಮೇಲೆ ವಂಚನೆ ಆರೋಪ ಹೊರಿಸಲಾದ 5 ವರ್ಷಗಳ ನಂತರ ನೇಹಲ್ ಮೋದಿಯ ಬಂಧನವಾಗಿದೆ.
