ಢಾಕಾ: ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಹಾಗೂ ಮಿತ್ರಪಕ್ಷಗಳು ಪ್ರತಿಭಟನೆ ತೀವ್ರಗೊಳಿಸಿದೆ. ರಸ್ತೆ ಮತ್ತು ರೈಲು ತಡೆ ನಡೆಸಿದೆ. ದೇಶದಾದ್ಯಂತ ಭದ್ರತೆಗಾಗಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ)ದ 147 ತುಕಡಿಗಳನ್ನು ನಿಯೋಜಿಸಲಾಗಿದೆ.
ದೇಶದ ಸಂವಿಧಾನವನ್ನು ತಿದ್ದುಪಡಿ ಮಾಡಿ, ಪಕ್ಷೇತರ ಹಂಗಾಮಿ ಸರ್ಕಾರ ರಚಿಸಬೇಕು ಮತ್ತು ಅದರ ಮೇಲ್ವಿಚಾರಣೆಯಲ್ಲಿ ನ್ಯಾಯಸಮ್ಮತವಾದ ಚುನಾವಣೆ ನಡೆಸಬೇಕು ಎಂದು ವಿರೋಧ ಪಕ್ಷ ಆಗ್ರಹಿಸಿದೆ.ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ವಶಕ್ಕೆ ಪಡೆದಿರುವ ವಿರೋಧ ಪಕ್ಷದ ನಾಯಕರು ಮತ್ತು ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಕ್ಷೇತರ ಹಂಗಾಮಿ ಸರ್ಕಾರ ರಚನೆಗೆ ಆಗ್ರಹಿಸಿರುವ ಬಿಎನ್‌ಪಿ, ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದೆ.
ಜನವರಿ 7ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.