Home ಟಾಪ್ ಸುದ್ದಿಗಳು ಪಿಡಿಪಿ ನಾಯಕನಿಗೆ ಜಾಮೀನು ನೀಡಿದ ಎನ್.ಐ.ಎ ನ್ಯಾಯಾಲಯ

ಪಿಡಿಪಿ ನಾಯಕನಿಗೆ ಜಾಮೀನು ನೀಡಿದ ಎನ್.ಐ.ಎ ನ್ಯಾಯಾಲಯ

ಹೊಸದಿಲ್ಲಿ: ಉಗ್ರಗಾಮಿ ಚಟುವಟಿಕೆಯ ಆರೋಪದ ಮೇಲೆ 2020ರ ನ.25ರಂದು ಬಂಧಿತರಾದ ಪಿಡಿಪಿ ಯೂತ್ ವಿಂಗ್ ಅಧ್ಯಕ್ಷ ವಹೀದ್ ಉರ್ ರಹ್ಮಾನ್ ಪರ್ರಾ ರಿಗೆ ಜಮ್ಮು ಮತ್ತು ಕಾಶ್ಮೀರದ ಎನ್.ಐ.ಎ ನ್ಯಾಯಾಲಯ ಜಾಮೀನು ನೀಡಿದೆ.  2020ರ ಜುಲೈಯಲ್ಲಿ ಎನ್.ಐ.ಎ ಸಲ್ಲಿಸಿದ ಮೂಲ ಚಾರ್ಜ್ ಶೀಟ್ ನಲ್ಲಿ ಅಪರಾಧದಲ್ಲಿ ಆತನ ಭಾಗೀದಾರಿಕೆಯ ಕುರಿತು ‘ಪಿಸುಮಾತು’ ಕೂಡ ಇರಲಿಲ್ಲ ಎಂದು ನ್ಯಾಯಾಲಯ ಅವಲೋಕನ ಮಾಡಿದೆ.

“ರಹ್ಮಾನ್ ಪರ್ರಾರನ್ನು ಕೌಂಟರ್ ಇಂಟಲಿಜೆನ್ಸ್ ಕಾಶ್ಮೀರ್ (ಸಿಐಕೆ) ತರುವಾಯ ಬಂಧಿಸಿತ್ತು ಎಂದು ತೀರ್ಪಿನ ಬಳಿಕ ಪಿಡಿಪಿ ಮುಖ್ಯಸ್ಥೆ ಮೆಹ್ಬೂಬ ಮುಫ್ತಿ ಶನಿವಾರ ಟ್ವೀಟ್ ಮಾಡಿದ್ದಾರೆ. ಆತನ ಬಂಧನ ಲಜ್ಜೆಗೆಟ್ಟ ನ್ಯಾಯಾಂಗ ಉಲ್ಲಂಘನೆ ಎಂದು ಅವರು ಬಣ್ಣಿಸಿದ್ದಾರೆ.

2020ರ ನವೆಂಬರ್ ಮತ್ತು ಡಿಸೆಂಬರ್ ಮಧ್ಯೆ ನಡೆದ ಜಿಲ್ಲಾ ಅಭಿವೃದ್ಧಿ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಕೆಲವು ದಿನಗಳ ಬಳಿಕ ಪರ್ರಾರನ್ನು ಉಗ್ರಗಾಮಿ ಚಟುವಟಿಕೆ ಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಬಂಧಿಸಲಾಗಿತ್ತು. ಕಳೆದ ವರ್ಷದ ಜುಲೈ ಮತ್ತು ಅಕ್ಟೋಬರ್ ನಲ್ಲಿ ಕ್ರಮವಾಗಿ ಸಲ್ಲಿಸಿದ ಮೂಲ ಮತ್ತು ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಆತನ ಹೆಸರನ್ನು ಉಲ್ಲೇಖಿಸಲಾಗಿರಲಿಲ್ಲ ಎಂದು ನ್ಯಾಯಾಲಯ ಅವಲೋಕಿಸಿದೆ.

“ತನಿಖಾ ಏಜೆನ್ಸಿಯ ಭಾಗದಿಂದ ನಡೆದ ಈ ರೀತಿಯ ನಿಷ್ಕ್ರಿಯತೆಯು ಪ್ರಸ್ತುತ ಅರ್ಜಿದಾರನನ್ನು ಪ್ರಸ್ತುತ ಪ್ರಕರಣದಲ್ಲಿ ‘ಆರೋಪಿ’ ಎಂದು ತೋರಿಸಲು ಉದ್ದೇಶಿಸಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇತರ ಆರೋಪಿ ವ್ಯಕ್ತಿಗಳ ವಿರುದ್ಧ ಮೂಲ ಚಾರ್ಜ್ ಶೀಟ್ ಮತ್ತು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ ನಂತರವೇ ತನಿಖಾ ಏಜೆನ್ಸಿ ಗಾಢ ನಿದ್ರೆಯಿಂದ ಎದ್ದಿದೆ. 2020ರ ನವೆಂಬರ್ 25ರಂದು ಪ್ರಸ್ತುತ ಅರ್ಜಿದಾರ ವಹೀದ್ ಉರ್ ರಹ್ಮಾನ್ ರನ್ನು ಬಂಧಿಸಿದೆ.  ಆರೋಪಕ್ಕೆ ತನಿಖಾ ಏಜೆನ್ಸಿಯು ನೀಡಿರುವ ಆಧಾರ – 2020ರ ಫೆಬ್ರವರಿ ತಿಂಗಳಲ್ಲಿ ಆರೋಪಿ ನವೀದ್ ಮುಶ್ತಾಕ್ ರಿಂದ ಪಡೆದು ದಾಖಲಿಸಿಕೊಂಡ ಹೇಳಿಕೆಯಷ್ಟೆ” ಎಂದು ನ್ಯಾಯಾಲಯ ತಿಳಿಸಿದೆ.

Join Whatsapp
Exit mobile version