Home ಅಂಕಣಗಳು ಬದ್ರ್ ಪುನರಾವರ್ತನೆಯಾಗಬೇಕಿದೆ

ಬದ್ರ್ ಪುನರಾವರ್ತನೆಯಾಗಬೇಕಿದೆ

‘‘ಅಲ್ಲಾಹನು ಕೆಲವರನ್ನು ಮತ್ತೆ ಕೆಲವರ ಮೂಲಕ ತೊಲಗಿಸದೆ ಇದ್ದಿದ್ದರೆ, ಭೂಮಿಯಲ್ಲಿ ಖಂಡಿತ ವಿನಾಶ ಮೆರೆಯುತ್ತಿತ್ತು. ನಿಜವಾಗಿ ಅಲ್ಲಾಹನು ಸಕಲ ಲೋಕಗಳ ಪಾಲಿಗೆ ಉದಾರನಾಗಿದ್ದಾನೆ’’. (ಪವಿತ್ರ ಕುರ್‌ಆನ್-2: 251)

ಈ ವಚನದ ಮೂಲಕ ಪವಿತ್ರ ಕುರ್‌ ಆನ್ ಮನುಷ್ಯನ ಸಾಮಾಜಿಕ ಸ್ಥಿರತೆಗೆ ಅತ್ಯಗತ್ಯವಾದ ತತ್ವವನ್ನು ಜಗತ್ತಿಗೆ ಪ್ರಸ್ತುತಪಡಿಸುತ್ತದೆ. ಮಾನವ ಸಮಾಜದ ಸ್ವಸ್ಥತೆ ಮತ್ತು ಅಸ್ತಿತ್ವಕ್ಕೆ ಧಕ್ಕೆ ತರುವ ದುಷ್ಟ ಶಕ್ತಿಗಳು ಹುಟ್ಟಿಕೊಂಡಾಗಲೆಲ್ಲಾ ಅದನ್ನು ಎದುರಿಸಿ ತಮ್ಮ ಉಳಿವಿಗಾಗಿ ಸಮಾಜದ ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತೊಂದು ಪಡೆ ಸಿದ್ಧವಾಗಬೇಕು ಎಂಬ ಪಾಠವೇ ಬದ್ರ್.

ಪ್ರತಿರೋಧವು ಜೀವಿಗಳ ನೈಸರ್ಗಿಕ ಪ್ರಚೋದನೆಯಾಗಿದೆ. ಮನುಷ್ಯನು ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕೆಂದು ಕುರ್‌ ಆನ್ ಕಲಿಸುತ್ತದೆ. ಎಲ್ಲಾ ಜೀವಿಗಳಂತೆ, ಮಾನವ ದೇಹವು ಕೆಲವು ಸಹಜ ಪ್ರತಿರೋಧ ವ್ಯವಸ್ಥೆಯನ್ನು ಹೊಂದಿದೆ. ಅದು ವಿಫಲವಾದರೆ ಮನುಷ್ಯ ಸತ್ತಂತೆ. ಸಮಾಜ ಆಕ್ರಮಣಕ್ಕೆ ಸಿಲುಕಿದಾಗ ಅದನ್ನು ತಡೆಯದಿದ್ದರೆ ಸಮಾಜ ನಾಶ ಹೊಂದಲಿದೆ.  ಸ್ವತಂತ್ರನಾಗಿ ಸೃಷ್ಟಿಸಲ್ಪಟ್ಟ ಮನುಷ್ಯನನ್ನು ಧರ್ಮ, ಜನಾಂಗ, ಬಣ್ಣ ಅಥವಾ ವಂಶದ ಆಧಾರದ ಮೇಲೆ ದೂರವಿಡಲು, ಅಂಚಿಗೆ ತಳ್ಳಲು, ಆಕ್ರಮಣ ಮಾಡಲು, ದಮನಿಸಲು ಅಥವಾ ಗುಲಾಮರನ್ನಾಗಿ ಮಾಡುವ ಹಕ್ಕು ಯಾರಿಗೂ ಇಲ್ಲ. ಸಮಾಜದಲ್ಲಿ ಇಂತಹ ಮಾನವ ಹಕ್ಕುಗಳ ಉಲ್ಲಂಘನೆಗಳು ಸಂಭವಿಸಿದಾಗ, ಅದನ್ನು ಪ್ರತಿರೋಧಿಸಲು ಸಂತ್ರಸ್ತರಿಗೆ ಇಸ್ಲಾಮ್ ಅನುಮತಿಸುತ್ತದೆ. ನುಬುವ್ವತ್(ಪ್ರವಾದಿತ್ವ) ಲಭಿಸಿದಂದಿನಿಂದ 13 ವರ್ಷಗಳ ಕಿರುಕುಳವನ್ನು ಅನುಭವಿಸಿದ ನಂತರ ತಮ್ಮ ಆಸ್ತಿ ಮತ್ತು ತಾಯ್ನಾಡನ್ನು ತೊರೆದ ಪ್ರವಾದಿ ಮತ್ತು ಅವರ ಅನುಯಾಯಿಗಳು ಮದೀನಾವನ್ನು ತಲುಪಿ ಅಲ್ಲಿ ಆದರ್ಶ ರಾಷ್ಟ್ರವನ್ನು ಸ್ಥಾಪಿಸುತ್ತಿದ್ದಾರೆಂದು ತಿಳಿದ ಮಕ್ಕಾದಲ್ಲಿನ ಖುರೈಶ್ ನಾಯಕರಿಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ.  ಈ ನಡುವೆ ಇಸ್ಲಾಮ್ ಮತ್ತು ಮುಸ್ಲಿಮರನ್ನು ಮದೀನಾದಿಂದ ಹೊರ ಹಾಕಲು ಶತ್ರುಗಳು ಪಿತೂರಿ ನಡೆಸುತ್ತಾರೆ ಮತ್ತು ಅವರು ಹಣಕಾಸಿನ ಸಂಗ್ರಹಗಳನ್ನು ಸಹ ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿಯೇ ದಮನಿತರಿಗೆ ಹೋರಾಟದ ಸ್ಫೂರ್ತಿ ನೀಡಲು ಕುರ್‌ ಆನ್ ಘೋಷಣೆಯೊಂದನ್ನು ಮಾಡುತ್ತದೆ.

‘‘ಯಾರ ವಿರುದ್ಧ ಯುದ್ಧ ಹೂಡಲಾಗಿತ್ತೋ ಅವರಿಗೆ (ಯುದ್ಧ ಹೂಡುವ) ಅನುಮತಿ ನೀಡಲಾಗಿದೆ. ಏಕೆಂದರೆ ಅವರ ಮೇಲೆ ಅಕ್ರಮ ನಡೆದಿದೆ. ಅವರಿಗೆ ನೆರವಾಗಲು ಅಲ್ಲಾಹನು ಖಂಡಿತ ಶಕ್ತನಾಗಿದ್ದಾನೆ. ಅವರು, ‘ಅಲ್ಲಾಹನೇ ನಮ್ಮೊಡೆಯ’ ಎಂದಷ್ಟೇ ಹೇಳಿದ ಕಾರಣಕ್ಕಾಗಿ, ಅನ್ಯಾಯವಾಗಿ ಅವರನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು. ಒಂದು ವೇಳೆ ಅಲ್ಲಾಹನು ಕೆಲವು ಜನರ ಮೂಲಕ ಮತ್ತೆ ಕೆಲವರನ್ನು ತೊಲಗಿಸದೆ ಇದ್ದಿದ್ದರೆ (ವಿರಕ್ತರ) ಆಶ್ರಮಗಳನ್ನು, (ಕ್ರೈಸ್ತರ) ಇಗರ್ಜಿಗಳನ್ನು, (ಯಹೂದ್ಯರ) ಪ್ರಾರ್ಥನಾಲಯಗಳನ್ನು ಮತ್ತು ಧಾರಾಳವಾಗಿ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವ ಮಸೀದಿಗಳನ್ನು ಕೆಡವಿ ಹಾಕಲಾಗುತ್ತಿತ್ತು. ತನಗೆ ನೆರವಾಗುವಾತನಿಗೆ ಅಲ್ಲಾಹನು ಖಂಡಿತ ನೆರವಾಗುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ತುಂಬಾ ಶಕ್ತಿಶಾಲಿಯೂ ಪ್ರಬಲನೂ ಆಗಿದ್ದಾನೆ’’ ( ಪವಿತ್ರ ಕುರ್‌ ಆನ್-ಅಲ್ ಹಜ್ಜ್: 39, 40)

ದಮನಿತರು ದಮನಕಾರಿಗಳ ವಿರುದ್ಧ ಪ್ರತಿರೋಧ ನಡೆಸುವ ಅವಕಾಶ ನೀಡುವುದರೊಂದಿಗೆ, ಅದರ ಸಮರ್ಥನೆಗಳನ್ನು ಮತ್ತು ಪ್ರತಿರೋಧ ಇಲ್ಲದಿದ್ದರೆ ಉಂಟಾಗುವ ದುಷ್ಪರಿಣಾಮಗಳನ್ನು ಕೂಡ ಕುರ್‌ಆನ್ ವಿವರಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯ, ಆರಾಧನಾ ಸ್ವಾತಂತ್ರ್ಯ, ಅಸ್ತಿತ್ವದ ರಕ್ಷಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ತಾನೊಬ್ಬ ದುರ್ಬಲ ಅಥವಾ ಅಲ್ಪಸಂಖ್ಯಾತ ಎಂಬ ಹಿಂಜರಿಕೆಯಿಲ್ಲದೆ ಸರ್ವಶಕ್ತನಾದ ಅಲ್ಲಾಹನ ಸಹಾಯವನ್ನು ಆಶಿಸುತ್ತಾ ಹೋರಾಡಲು ಮೇಲೆ ತಿಳಿಸಿದ ದೈವಿಕ ವಚನ ಅನುಮತಿ ನೀಡಿದೆ.

ಮುಸ್ಲಿಮರ ಆಸ್ತಿಯನ್ನು ಕಬಳಿಸಿ ಅವರ ವಿರುದ್ಧವೇ ಬಳಸಲು ಸಂಚು ರೂಪಿಸುತ್ತಿದ್ದ ಮಕ್ಕಾ ಮುಶ್ರಿಕರಿಂದ ಅದನ್ನು ವಶಪಡಿಸಿಕೊಳ್ಳಲು ಇಟ್ಟ ಹೆಜ್ಜೆಯ ಭಾಗವಾಗಿ ಅಬು ಸುಫ್ಯಾನ್‌ ರ ನೇತೃತ್ವದಲ್ಲಿ ಸಿರಿಯಾಕ್ಕೆ ಹೋದ ವ್ಯಾಪಾರಿಗಳ ಸಂಪತ್ತನ್ನು ಪ್ರವಾದಿವರ್ಯರು ವಶಪಡಿಸಿಕೊಳ್ಳಲು ನಿರ್ಧರಿಸುತ್ತಾರೆ. ಪ್ರವಾದಿವರ್ಯರು ಮತ್ತು ಅವರ ಅನುಯಾಯಿಗಳು ಅದಕ್ಕಾಗಿ ಹೊರಟು ನಿಲ್ಲುತ್ತಾರೆ. ಆದರೆ ದೇವರ ತೀರ್ಮಾನ ವಿಭಿನ್ನವಾಗಿತ್ತು. ಪ್ರವಾದಿಯವರ ನಡೆಯನ್ನು ಗ್ರಹಿಸಿದ ಅಬು ಸುಫ್ಯಾನ್‌ ಸಹಾಯಕ್ಕಾಗಿ ವಿನಂತಿಯೊಂದಿಗೆ ಮಕ್ಕಾಗೆ ಒಬ್ಬರನ್ನು ಕಳುಹಿಸುತ್ತಾರೆ. ನಂತರ ಬೇರೆ ದಾರಿಯಾಗಿ ತಪ್ಪಿಸಿಕೊಳ್ಳುತ್ತಾರೆ.

ಈ ಬಗ್ಗೆ ಮಾಹಿತಿ ಪಡೆದ ಮಕ್ಕಾ ಮುಶ್ರಿಕರು ಅಹಂಕಾರಿಯಾದ ಅಬುಜಹ್ಲ್‌ ನ ನೇತೃತ್ವದಲ್ಲಿ ಹುಮ್ಮಸ್ಸಿನೊಂದಿಗೆ ಒಂದು ಸಾವಿರ ಜನರ ದೊಡ್ಡ ಸೈನ್ಯವನ್ನು ಸಜ್ಜುಗೊಳಿಸಿ ಬದ್ರ್ ಕಡೆಗೆ ಸಾಗುತ್ತಾರೆ. ಮುಸ್ಲಿಮರನ್ನು ನಿರ್ನಾಮ ಮಾಡಿಯೇ ಸಿದ್ಧ ಎಂಬುದು ಅವರ ಹಠವಾಗಿತ್ತು. ಮಕ್ಕಾ ಮುಶ್ರಿಕರ ನಡೆಯ ಬಗ್ಗೆ ಮಾಹಿತಿ ಪಡೆದ ಪ್ರವಾದಿ (ಸ) ಅವರು ಅನುಯಾಯಿಗಳ ಬಳಿ ಅಭಿಪ್ರಾಯಗಳನ್ನು ಕೇಳುತ್ತಾರೆ. 82 ಮುಹಾಜಿರ್‌ ಗಳು ಮತ್ತು 231 ಅನ್ಸಾರ್‌ ಗಳು ಸೇರಿದಂತೆ 313 ಮುಸ್ಲಿಮರು ಮುಸ್ಲಿಮ್ ತಂಡದಲ್ಲಿದ್ದರು. 82 ಮುಹಾಜಿರ್‌ ಗಳು ಮತ್ತು 231 ಅನ್ಸಾರ್‌ಗಳು ಸೇರಿದಂತೆ 313 ಮುಸ್ಲಿಮರ ತಂಡವನ್ನು ಪ್ರವಾದಿವರ್ಯರು ಸಜ್ಜುಗೊಳಿಸುತ್ತಾರೆ.  ಮುಹಾಜಿರೀನ್ ಪ್ರತಿನಿಧಿಗಳು ಪ್ರವಾದಿಯವರ ಯಾವುದೇ ಆಜ್ಞೆಯನ್ನು ಪಾಲಿಸಲು ಸಿದ್ಧ ಎಂದು ಧೈರ್ಯದಿಂದ ಘೋಷಿಸುತ್ತಾರೆ. ಅನ್ಸಾರ್‌ ಗಳ ಪ್ರತಿಕ್ರಿಯೆ ಹೀಗಿತ್ತು. ‘ನಾವು ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರಾಗಿದ್ದೇವೆ, ನೀವು ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಿ. ನಿಮ್ಮನ್ನು ಸತ್ಯದೊಂದಿಗೆ ಕಳುಹಿಸಿದವನು ಅವನೇ, ನಿಮ್ಮ ನಿರ್ಧಾರ ಏನೇ ಆಗಲಿ ನಾವು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ನಿರ್ಧಾರವು ಭೋರ್ಗರೆಯುವ ಸಾಗರದ ಅಲೆಗಳನ್ನು ದಾಟುವುದಾದರೂ ಸರಿ’.

ವ್ಯಾಪಾರದ ಸರಕನ್ನು ತಡೆಯಲು ಬಂದು ಅನಿರೀಕ್ಷಿತವಾಗಿ ಯುದ್ಧ ಭೂಮಿಗೆ ಮರಳಬೇಕಾದ ಪರಿಸ್ಥಿತಿ ಎದುರಾದಾಗ ಕೆಲವು ದುರ್ಬಲ ಮನಸ್ಕರು ಅಸಮಾಧಾನಗೊಂಡರೂ ಜೊತೆಗಿದ್ದ ಸಹೋದರರ ಹೋರಾಟದ ಮನೋಭಾವವು ಅವರನ್ನೂ ಇನ್ನಷ್ಟು ಪ್ರಚೋದಿಸಿತು.

ಸನ್ನದ್ಧತೆ, ಪ್ರಾರ್ಥನೆ

ತನ್ನ ಸಹಚರರ ಸನ್ನದ್ಧತೆಯಿಂದ ತೃಪ್ತರಾದ ಪ್ರವಾದಿಯವರು ಸೈನ್ಯವನ್ನು ಸಂಘಟಿಸಿದರು. ಉತ್ಸಾಹಭರಿತ ಮಾತುಗಳಿಂದ ಅವರನ್ನು ಪ್ರೇರೇಪಿಸಿದರು. ಸರ್ವ ಸೈನ್ಯಾಧಿಕಾರಿಯಾದ ಪ್ರವಾದಿವರ್ಯರ ನೇತೃತ್ವದಲ್ಲಿ ಸೈನ್ಯವು ಶುಭ್ರ ಧ್ವಜದೊಂದಿಗೆ ಮುನ್ನಡೆಯಿತು. ನಂತರ ಬದ್ರ್‌ ನಲ್ಲಿ ಬೀಡುಬಿಟ್ಟಿತು. ಶತ್ರುಗಳ ಸಂಖ್ಯೆ, ಶಕ್ತಿ ಮತ್ತು ಹೋರಾಟದ ಸಾಮರ್ಥ್ಯವನ್ನು ಕೌಶಲ್ಯದಿಂದ ಅರಿತ ಪ್ರವಾದಿ (ಸ) ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಹೇಳಿದರು: ‘ಮಕ್ಕಾ ತನ್ನ ಕರುಳಿನ ತುಂಡುಗಳನ್ನು ನಿಮಗಾಗಿ ಎಸೆದಿದೆ’

ಶಸ್ತ್ರಾಸ್ತ್ರಗಳು ಮತ್ತು ಯುದ್ಧಕ್ಕೆ ಅಗತ್ಯವಾದ ವಾಹನಗಳೇನೂ ಇಲ್ಲದ, ಅಲ್ಲಾಹನಲ್ಲಿ ಮಾತ್ರ ದೃಢವಾದ ನಂಬಿಕೆಯನ್ನು ಇರಿಸಿದ ತನ್ನ ಸೈನ್ಯದ ಮಿತಿಗಳ ಕುರಿತು ಮತ್ತು ತಮಗಿಂತ ಮೂರು ಪಟ್ಟು ಹೆಚ್ಚು ಶತ್ರುಗಳ ಸಂಪನ್ಮೂಲಗಳ ಬಗ್ಗೆ ಚೆನ್ನಾಗಿ ತಿಳಿದಿದ್ದ ಪ್ರವಾದಿವರ್ಯರು ಯುದ್ಧಕ್ಕೆ ಸೈನ್ಯವನ್ನು ಸಿದ್ಧಗೊಳಿಸಿದರು. ಪ್ರವಾದಿವರ್ಯರು ಅಲ್ಲಾಹನ ಸಹಾಯದ ಭರವಸೆ ಮತ್ತು ಹುತಾತ್ಮತೆಯ ಉನ್ನತ ಪ್ರತಿಫಲವನ್ನು ಉತ್ಸಾಹದಿಂದ ಅನುಯಾಯಿಗಳಿಗೆ ವಿವರಿಸಿದರು. ನಂತರ ವಿಶ್ವಾಸಿಗಳ ಪ್ರಬಲ ನಾಯಕರಾದ ಪ್ರವಾದಿವರ್ಯರು ತನ್ನ ಪ್ರಭುವಿನ ಮುಂದೆ ಪ್ರಾರ್ಥಿಸುತ್ತಾ ಸಾಷ್ಟಾಂಗವೆರಗಿದರು. ಆ ಹೃದಯಪೂರ್ವಕ ಪ್ರಾರ್ಥನೆಗೆ ಅಲ್ಲಾಹನು ಉತ್ತರ ಕೊಟ್ಟನು.

‘‘ನೀವು ನಿಮ್ಮ ಒಡೆಯನೊಡನೆ ನೆರವನ್ನು ಬೇಡಿದಾಗ, ಬೆನ್ನು ಬೆನ್ನಿಗೇ ಬರುವ ಸಾವಿರ ಮಲಕ್‌ ಗಳ ಮೂಲಕ ನಿಮಗೆ ನೆರವಾಗುವೆನೆಂದು ಅವನು ನಿಮಗೆ ಉತ್ತರಿಸಿದನು’’. (ಪವಿತ್ರ ಕುರ್‌ ಆನ್- 8: 9)

‘ಅಲ್ಲಾಹನ ಸಹಾಯದ ಬಗ್ಗೆ ಆವೇಶದಿಂದ ತನ್ನ ಅನುಯಾಯಿಗಳಿಗೆ ಪ್ರವಾದಿವರ್ಯರು ಘೋಷಿಸಿದರು. ಆ ತಂಡ ಸೋಲನುಭವಿಸಲಿದ್ದು, ಖಂಡಿತವಾಗಿಯೂ ಅವರು ಹಿಂದಿರುಗಿ ಓಡಲಿದ್ದಾರೆ. ಮುಹಮ್ಮದ್‌ನ ಆತ್ಮ ಯಾರ ಕೈಯಲ್ಲಿದೆಯೋ ಅವನಾಣೆ. ಯಾರು ಹಿಂದೆ ಸರಿಯದೆ ತಾಳ್ಮೆ ಮತ್ತು ಪ್ರತಿಫಲಾಪೇಕ್ಷೆಯಿಂದ ಶತ್ರುಗಳನ್ನು ಎದುರಿಸುತ್ತಾರೋ ಅವರು ಸ್ವರ್ಗವಾಸಿಗಳಾಗುತ್ತಾರೆ’ ಎಂದು ಶತ್ರುಗಳ ಕಡೆ ಚಿರತೆಗಳಂತೆ ನೆಗೆಯಲು ಪ್ರವಾದಿ (ಸ) ಅನುಯಾಯಿಗಳಿಗೆ ಕರೆ ನೀಡಿದರು.

‘ಆಕಾಶಭೂಮಿಗಿಂತ ವಿಶಾಲವಾದ ಸ್ವರ್ಗಕ್ಕಾಗಿ ಎದ್ದು ನಿಲ್ಲಿರಿ’ ಎಂಬ ಪ್ರೀತಿಯ ನಾಯಕನ ಮಾತು ವಿಶ್ವಾಸಿಗಳ ಹೋರಾಟದ ಉತ್ಸಾಹವನ್ನು ಇನ್ನಷ್ಟು ಇಮ್ಮಡಿಗೊಳಿಸಿತು. ಅವರು ಹೋರಾಟಕ್ಕೆ ಸಿದ್ಧರಾದರು.

ರಣರಂಗ

ಹಿಜ್ರಾದ ಎರಡನೇ ವರ್ಷದಲ್ಲಿ ರಮಝಾನ್ 17ರಂದು ಸುಮಾರು ಒಂದು ಸಾವಿರ ಶಸ್ತ್ರಸಜ್ಜಿತ ಖುರೈಶ್ ಪಡೆಗಳು ಮತ್ತು ಕೇವಲ 313 ಜನರ ಮುಸ್ಲಿಮ್ ಸೈನ್ಯ ಯುದ್ಧದಲ್ಲಿ ಮುಖಾಮುಖಿಯಾದವು.  ಇಸ್ಲಾಂ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಕೇವಲ ಹೂವು ಕೀಳುವಂತೆ ಸುಲಭವಾಗಿ ನಿರ್ನಾಮ ಮಾಡಬಹುದೆಂಬ ಭ್ರಮೆಯಿಂದ ಹಾಡುತ್ತಾ ಕುಣಿಯುತ್ತಿದ್ದ ಅಬೂ ಜಹ್ಲ್‌ ನ ಸೈನ್ಯವು ಅಲ್ಪಸಂಖ್ಯಾತ ವಿಶ್ವಾಸಿಗಳ ಈಮಾನ್ ಮತ್ತು ದೃಢತೆಯ ಮುಂದೆ ಛಿದ್ರ ಛಿದ್ರವಾಯಿತು. ತಮ್ಮ ದೇಹಗಳನ್ನು ಮರೆತು ಹೋರಾಡಿದ ಬದ್ರ್ ಶುಹದಾಗಳು ಶತ್ರುಗಳ ರೇಖೆಯನ್ನು ದಾಟಿ ಮುನ್ನಡೆದರು. ಅವರು ಅಲ್ಲಾಹನ ಸಹಾಯವನ್ನು ಮತ್ತು ಆಕಾಶದಿಂದ ಇಳಿದು ಬಂದ ಮಲಕ್‌ ಗಳ ಉಪಸ್ಥಿತಿಯನ್ನು ಅನುಭವಿಸಿದರು. ‘ಯೌಮುಲ್ ಫುರ್ಕಾನ್’ ಎಂದು ಕುರ್‌ ಆನ್ ಬಣ್ಣಿಸಿದ ಆ ದಿನದಲ್ಲಿ ಸತ್ಯವು ಜಯಗಳಿಸಿ ಸುಳ್ಳು ಸೋಲನ್ನಪ್ಪುತ್ತದೆ. ಶತ್ರುಗಳಲ್ಲಿ 70 ಮಂದಿ ಕೊಲ್ಲಲ್ಪಟ್ಟರು. 70 ಮಂದಿ ಸೆರೆಹಿಡಿಯಲ್ಪಟ್ಟರು. 14 ಮುಸ್ಲಿಮರು ಶಹೀದ್ ಆದರು.

ಮತ್ತೊಬ್ಬ ಫರೋವನ ಅಂತ್ಯ

ಕದನ ಬಿರುಸುಗೊಳ್ಳುತ್ತಿದ್ದ ಬದ್ರ್‌ ನ ರಣರಂಗದಲ್ಲಿ ಸಹಾಬಿಗಳ ಖಡ್ಗಕ್ಕೆ ಮಕ್ಕಾದ ಕರುಳಿನ ತುಂಡುಗಳು ಒಂದೊಂದಾಗಿ ಬಲಿಯಾಗುತ್ತಿದ್ದವು. ಇದನ್ನು ನೋಡಿದ ಅಲ್ಲಾಹನ ಸಂದೇಶವಾಹಕರ ಘೋರ ಶತ್ರುವಾದ ಅಬೂ ಜಹ್ಲ್ ಕುದುರೆಯ ಮೇಲೇರಿ ಸುತ್ತಾಡುತ್ತಿದ್ದಾಗ ಅವನ ಅನುಯಾಯಿಗಳ ಸುರಕ್ಷತಾ ಬೇಲಿಯನ್ನು ಭೇದಿಸಿದ ಇಬ್ಬರು ಹದಿಹರೆಯದ ಮುಸ್ಲಿಮ್ ಯೋಧರು ಅವನನ್ನು ಕೆಳಗೆ ಬೀಳಿಸಿ ವಧಿಸಿದರು. ಇಬ್ನ್ ಮಸ್‌ಊದ್ ಎಂಬ ಯುವ ಯೋಧ ಅಬೂಜಹ್ಲ್‌ ನ ಮೃತ ಶಿರಚ್ಛೇದವನ್ನು ಪ್ರವಾದಿಯವರ ಮುಂದೆ ಹಾಜರುಪಡಿಸುತ್ತಾರೆ. ಭರವಸೆಯನ್ನು ಪೂರೈಸಿದ ಅಲ್ಲಾಹನನ್ನು ಸ್ತುತಿಸುತ್ತಾ ಪ್ರವಾದಿ (ಸ), ಅಬೂ ಜಹ್ಲ್‌ ನ ದೇಹವನ್ನು ನೋಡಿ ಹೇಳಿದರು: ‘ಇವನು ಈ ಸಮುದಾಯದ ಫಿರ್‌ ಔನ್’

ಬದ್ರ್‌ ನ ಯುದ್ಧದ ನಂತರ….

ಬದ್ರ್‌ ನ ವಿಜಯವು ಒಂದು ವಿಶಿಷ್ಟ ಮತ್ತು ತ್ಯಾಗಮಯವಾದ ಘಟನೆಯಾಗಿ ಇತಿಹಾಸದ ಸುವರ್ಣ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಿದೆ. ಸತ್ಯವು ಅಸತ್ಯದ ವಿರುದ್ಧ ಜಯ ಸಾಧಿಸಿದ ದಿನ. ಅಲ್ಪಸಂಖ್ಯಾತರಾದ ವಿಶ್ವಾಸಿಗಳು ಅಲ್ಲಾಹನ ಸಹಾಯದಿಂದ ಅಹದ್ ಅಹದ್ ಎಂಬ ಘೋಷಣೆಯೊಂದಿಗೆ ತಮಗಿಂತಲೂ ಮೂರು ಪಟ್ಟು ಅಧಿಕ ಇರುವ ಸಂಪೂರ್ಣ ಶಸ್ತ್ರಸಜ್ಜಿತರಾದ ಶತ್ರುಗಳನ್ನು ಅಟ್ಟಾಡಿಸಿ ಇತಿಹಾಸ ಬರೆದ ದಿನ.

ವಿಜಯಿಗಳಾಗಿ ಮದೀನಾಕ್ಕೆ ಹಿಂದಿರುಗಿದ ಪ್ರವಾದಿ ಮತ್ತು ಅವರ ಅನುಯಾಯಿಗಳನ್ನು ಮದೀನಾದ ಜನರು ತಕ್ಬೀರ್ ಧ್ವನಿಗಳೊಂದಿಗೆ ಸ್ವಾಗತಿಸಿದರು. ಮದೀನಾ ಹಾಗೂ ಸುತ್ತಮುತ್ತಲಿನ ಶತ್ರುಗಳು ಮುಸ್ಲಿಮರ ಶಕ್ತಿ ಮತ್ತು ಸ್ಥಾನವನ್ನು ಒಪ್ಪಿಕೊಳ್ಳಬೇಕಾಯಿತು.

ಅನೇಕ ಜನರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಪ್ರವಾದಿ(ಸ) ಅವರು ಶತ್ರುಗಳಿಂದ ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ನ್ಯಾಯಯುತವಾಗಿ ಜನರಿಗೆ ಹಂಚಿದರು. ಬಂಧಿಸಲ್ಪಟ್ಟವರ ವಿಷಯದಲ್ಲಿ  ಉಮರ್ (ರ) ವಧಿಸಬೇಕೆಂದು ಅಭಿಪ್ರಾಯಪಟ್ಟರೆ, ಅಬೂಬಕರ್ (ರ)ಅವರು ಬಿಡುಗಡೆ ಮಾಡಬೇಕು ಎಂದು ಸಲಹೆ ನೀಡಿದರು. ಪ್ರವಾದಿಯವರು ಅಬೂಬಕರ್(ರ)ಅವರ ಅಭಿಪ್ರಾಯವನ್ನು ಒಪ್ಪಿಕೊಂಡರು.

ಪಾಠಗಳು

ಬದ್ರ್ ದಮನಕಾರಿ ಶಕ್ತಿಗಳ ವಿರುದ್ಧ ದಮನಿತರ ವಿಜಯವಾಗಿದೆ. ದೃಢ ವಿಶ್ವಾಸ, ಇಚ್ಛಾಶಕ್ತಿ, ವಿಧೇಯತೆ, ಸನ್ನದ್ಧತೆ, ಪ್ರಾರ್ಥನಾ ಮನಸ್ಸಿನ ಗುಂಪಿನ ಮುಂದೆ ಅಧರ್ಮದ ಭದ್ರಕೋಟೆಗಳು ಕೇವಲ ಕಾಗದದ ಡೇರೆಗಳು ಎಂದು ಬದ್ರ್ ಕಲಿಸುತ್ತದೆ. ದಮನಿತರು ಯಾವಾಗಲೂ ಅಲ್ಪಸಂಖ್ಯಾತರಾಗಿರಬಹುದು.  ಆದರೆ ಕೀಳರಿಮೆಯ ಮನೋಭಾವದಿಂದ ಮುಕ್ತರಾಗಿ ಪ್ರತಿರೋಧಕ್ಕೆ ಸಜ್ಜಾದಾಗ ಮಾತ್ರ ಅವರಿಗೆ ಮುಕ್ತಿ ಸಾಧ್ಯ.

ದಮನಕಾರಿ ಶಕ್ತಿಗಳು ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ವಿರುದ್ಧ ದೌರ್ಜನ್ಯ ಎಸಗಿದಾಗ ಧ್ವನಿ ಎತ್ತದೆ ದೂರ ನಿಲ್ಲುವುದು ಆತ್ಮಹತ್ಯೆಗೆ ಸಮಾನ ಎಂದು ಬದ್ರ್ ಸಂದರ್ಭದ ಅಲ್ಲಾಹನ ವಚನಗಳು ಸ್ಪಷ್ಟಪಡಿಸುತ್ತವೆ. ಸಮಾಜದ ಪ್ರಗತಿಗೆ ಅಡ್ಡಿಯಾಗುವ ದುಷ್ಟಶಕ್ತಿಗಳ ಷಡ್ಯಂತ್ರದ ವಿರುದ್ಧ ಪ್ರತಿತಂತ್ರಗಳನ್ನು ರೂಪಿಸುವ ಮೂಲಕ ಮಾತ್ರ ಪರಿಣಾಮಕಾರಿ ಪ್ರತಿರೋಧವನ್ನು ಸಾಧಿಸಬಹುದು ಎಂದು ಪ್ರವಾದಿ (ಸ) ಅವರ ಯುದ್ಧದ ಸಿದ್ಧತೆಗಳು ನಮಗೆ ಕಲಿಸುತ್ತವೆ.

 ಸಮುದಾಯದ ಅಸ್ತಿತ್ವವನ್ನೇ ಪ್ರಶ್ನಿಸಿ ನರಮೇಧದ ಕರೆ ನೋಡುತ್ತಿರುವಾಗ ಮುಸಲ್ಮಾನನಿಗೆ ಹೋರಾಟಗಳಲ್ಲಿ ಪಾಲ್ಗೊಳ್ಳುವಾಗ ಕನಿಷ್ಠ ಸನ್ನದ್ಧತೆಯೇ ಸಾಕು ಎಂಬುದನ್ನು ಬದ್ರ್‌ ನಲ್ಲಿ ಭಾಗವಹಿಸಿದ ಅನ್ಸಾರರ ಸಂಖ್ಯೆಯಿಂದ ನಾವು ಕಲಿಯಬಹುದು. ಸಮುದಾಯ ಬಿಕ್ಕಟ್ಟಿನಲ್ಲಿ ಸಿಲುಕಿದಾಗ ಅವರಿಗೆ ಹುಮ್ಮಸ್ಸು ನೀಡಿ ಪ್ರೇರೇಪಿಸುವಂತಹ ನಾಯಕರು ಮಾತ್ರ ಗೆಲುವಿನತ್ತ ಕೊಂಡೊಯ್ಯಬಲ್ಲರು ಎಂಬುದಕ್ಕೆ ಬದ್ರ್ ನ ನಾಯಕ ಮಾದರಿಯಾಗಿದ್ದಾರೆ.

ಫಿರ್‌ ಔನ್ ಎಂಬುದು ಐತಿಹಾಸಿಕ  ಕಥಾ ಪಾತ್ರ ಮಾತ್ರವಲ್ಲ, ಕಾಲಕಾಲಕ್ಕೆ ಹುಟ್ಟಿಕೊಳ್ಳುವ ದುಷ್ಟ ಮತ್ತು ಕ್ರೌರ್ಯದ ಮೂರ್ತರೂಪವೂ ಹೌದು. ಅವರನ್ನು ಗುರುತಿಸಿ ಎದುರಿಸಲು ‘ಮೂಸಾ’ರಂತವರು ಮರು ಹುಟ್ಟು ಪಡೆಯಲೇಬೇಕು.

ಪ್ರವಾದಿ(ಸ) ಅವರು ಯುದ್ಧಭೂಮಿಯಲ್ಲಿ ಸೈನ್ಯವನ್ನು ಸಜ್ಜುಗೊಳಿಸುವುದರೊಂದಿಗೆ ಪ್ರಾರ್ಥಿಸುತ್ತಿದ್ದರು. ಸತ್ಯದ ವಿಚಾರದಲ್ಲಿ ಸಮರ್ಪಣಾ ಮನೋಭಾವದಿಂದ ಮುನ್ನುಗ್ಗಿದರೆ ಸರ್ವಶಕ್ತನು ಸಹಾಯ ಮಾಡುವುದರಲ್ಲಿ ಸಂದೇಹವಿಲ್ಲ ಎಂಬುದು ಬದ್ರ್ ಯುದ್ಧದ ಸಂದೇಶವಾಗಿದೆ.

ಅನುಸ್ಮರಣೆ

ಬದ್ರ್ ಸ್ಮರಣೆ ಅಗತ್ಯವೇ ಆಗಿದೆ. ಆದರೆ ಇದು ತ್ಯಾಗದ ಜೀವನವನ್ನು ನಡೆಸಿದ ಬದ್ರ್ ಶುಹದಾಗಳನ್ನು ಅನುಸರಿಸಲು ನಮ್ಮನ್ನು ಪ್ರೇರೇಪಿಸಬೇಕು. ವರ್ಷಂಪ್ರತಿ ನಡೆಯುವ ಬದ್ರ್ ಸ್ಮರಣೆಗಳು ಸಾಮಾನ್ಯವಾಗಿ ‘ಆಹಾರ ಪ್ರಧಾನ’ ಆಚರಣೆಯಾಗಿ ಬದಲಾಗುತ್ತಿರುವುದು ವಿಪರ್ಯಾಸ.

 ಇಂಪೀರಿಯಲಿಸಂ, ಕ್ಯಾಪಿಟಲಿಸಂ, ಜಿಯೋನಿಸಂ, ಕಮ್ಯುನಿಸಂ, ಫ್ಯಾಶಿಸಂ ಸೇರಿದಂತೆ ಹಲವಾರು ‘ಇಸಂ’ ಗಳು ಇಸ್ಲಾಂ ಧರ್ಮವನ್ನು ನಾಶಮಾಡುವ ಏಕೈಕ ಗುರಿಯೊಂದಿಗೆ ಸುಳ್ಳು ಮತ್ತು ತಪ್ಪು ಕಲ್ಪನೆಗಳನ್ನು ಹರಡಿ ಸತ್ಯ ಮತ್ತು ಸುಳ್ಳನ್ನು ಬೆರೆಸುವ ಮೂಲಕ ಇಸ್ಲಾಮೋಫೋಬಿಯಾವನ್ನು ಬೆಳೆಸುವಾಗ ‘ಯೌಮುಲ್ ಫುರ್ಖಾನ್’ ನ ಹುಟ್ಟಿಗಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡಿ ಅಲ್ಲಾಹನಿಗೆ ಮಾತ್ರ ಭಯಪಡುವ, ಯಾವುದೇ ವಿಮರ್ಶಕರ ನಿಂದನೆಗಳಿಗೆ ಹೆದರದ ಸಮಾಜವು ಇಂದಿನ  ಬೇಡಿಕೆಯಾಗಿದೆ. ಹೌದು, ಬದ್ರ್ ಎಂಬುದು ಕೇವಲ ಅನುಸ್ಮರಣೆಗೆ ಮಾತ್ರವಲ್ಲ, ಅದು ಪುನರಾವರ್ತನೆ ಆಗಬೇಕಿದೆ.

Join Whatsapp
Exit mobile version