Home ಟಾಪ್ ಸುದ್ದಿಗಳು ಬದ್ಲಾಪುರ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಇಂಟರ್ನೆಟ್ ಸ್ಥಗಿತ

ಬದ್ಲಾಪುರ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಇಂಟರ್ನೆಟ್ ಸ್ಥಗಿತ

ಮುಂಬೈ: ಮಹಾರಾಷ್ಟ್ರ ಥಾಣೆ ಜಿಲ್ಲೆಯ ಬದ್ಲಾಪುರ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.


ಶಿಶುವಿಹಾರದಲ್ಲಿ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಜನರು ಬದ್ಲಾಪುರ್ ರೈಲು ನಿಲ್ದಾಣದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ಒಂದು ದಿನದ ನಂತರ ಇಂದು(ಬುಧವಾರ) ಹೆಚ್ಚಿನ ಶಾಲೆಗಳನ್ನು ಮುಚ್ಚಲಾಗಿದೆ. ಲೈಂಗಿಕ ದೌರ್ಜನ್ಯವೆಸಗಿದ ಶಾಲೆಯ ಸ್ವೀಪರ್, ಆರೋಪಿ ಅಕ್ಷಯ್ ಶಿಂಧೆಯನ್ನು ಬುಧವಾರ ಸ್ಥಳೀಯ ನ್ಯಾಯಾಲಯವು ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 26 ರವರೆಗೆ ವಿಸ್ತರಿಸಿತು.

ಕಳೆದ ವಾರ ಘಟನೆ ನಡೆದ ಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಿಗಿ ಪೊಲೀಸ್ ಭದ್ರತೆಯ ನಡುವೆ ಇಂದು ಬೆಳಗ್ಗೆ ಜಿಲ್ಲೆಯ ಕಲ್ಯಾಣ್ನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

ಕಾನೂನು ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬದ್ಲಾಪುರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರತಿಭಟನೆ ಮತ್ತು ನಂತರದ ಹಿಂಸಾಚಾರದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಿಸಿಪಿ ಸುಧಾಕರ ಪಠಾರೆ ಬುಧವಾರ ತಿಳಿಸಿದ್ದಾರೆ. ಪಟ್ಟಣದ ಪರಿಸ್ಥಿತಿ ಅವಲೋಕಿಸಿದ ಬಳಿಕ ಇಂಟರ್ನೆಟ್ ಸೇವೆಯನ್ನು ಮರುಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.


ದೂರಿನ ಪ್ರಕಾರ ಅಕ್ಷಯ್ ಶಿಂಧೆ ಶಾಲೆಯ ಶೌಚಾಲಯದಲ್ಲಿ ಬಾಲಕಿಯರನ್ನು ನಿಂದಿಸಿದ್ದಾನೆ. ಘಟನೆಯ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರು, ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್ನ್ನು ಅಮಾನತುಗೊಳಿಸಿದೆ. ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶಿಸಿದೆ.


Join Whatsapp
Exit mobile version