ಬೆಂಗಳೂರು: ಬಾಬಾ ಬುಡನ್ ಗಿರಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಮುಸ್ಲಿಮರಿಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಇದರ ವಿರುದ್ಧ ಹೋರಾಟ ಕೈಗೊಂಡಿರುವ ಸಯ್ಯದ್ ಗೌಸ್ ಮೋಹಿದ್ದೀನ್ ಶಾಖಾದ್ರಿ ಅವರಿಗೆ ಮೊದಲ ಹಂತದ ಜಯ ಲಭಿಸಿದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ಈ ಅದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಕಾನೂನು ಹೋರಾಟದಲ್ಲಿ ಎಸ್‌ಡಿಪಿಐ ಪಕ್ಷ ಸಯ್ಯದ್ ಗೌಸ್ ಮೋಹಿದ್ದೀನ್ ಶಾಖಾದ್ರಿ ಅವರಿಗೆ ಬೆಂಬಲವಾಗಿ ನಿಂತಿತ್ತು ಎಂಬ ಹೆಮ್ಮೆ ನಮಗಿದೆ ಮತ್ತು ಈ ಆದೇಶ ಪಕ್ಷಕ್ಕೆ ಸಂತದ ತಂದಿದೆ. ಮಧ್ಯಂತರ ಆದೇಶ ಈ ಹೋರಾಟದಲ್ಲಿ ಮೊದಲ ಗೆಲುವಾಗಿದ್ದು, ಮುಂದೆ ಪೂರ್ಣ ಪ್ರಮಾಣದ ನ್ಯಾಯ ದೊರೆಯಲಿದೆ ಎಂದು ಅಫ್ಸರ್ ವಿಶ್ವಾಸ ವ್ಯಕ್ತಪಡಿಸಿದರು.
17ನೇ ಶತಮಾನದ ಸೂಫಿ ಕ್ಷೇತ್ರವಾದ ಬಾಬಾ ಬುಡನ್ ಗಿರಿಯನ್ನು ಹಿಂದುತ್ವ ಪಡೆಗಳು ತಮ್ಮದೆಂದು ಸಾಧಿಸಲು ಹೊರಟು ನಿಂತಿವೆ. ಅದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸರ್ಕಾರ ಮಣಿಯುವ ದೌರ್ಬಲ್ಯ ಪ್ರದರ್ಶಿಸಿವೆ. 2017ರಲ್ಲಿ ಇಲ್ಲಿ ಹಿಂದುತ್ವ ಪಡೆಗಳಿಗೆ ಅನುಕೂಲವಾಗುವಂತೆ ಅವರ ಕಾರ್ಯಗಳಿಗೆ ಅನುವು ಮಾಡಿಕೊಡಲಾಗಿದೆ. ಜೊತೆಗೆ ಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದ ಪ್ರಾರ್ಥನೆಗೆ ತೊಡಕು ಉಂಟು ಮಾಡಲಾಗಿದೆ. ಈ ನಿಟ್ಟಿನಲ್ಲಿ ಈಗ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಅನುಗುಣವಾಗಿಯೇ ಅಂತಿಮ ತೀರ್ಪು ಬರಲಿದ್ದು, ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಹಳೆಯ ಸಂಪ್ರದಾಯಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಅಫ್ಸರ್ ಅವರು ತಮ್ಮ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.