Home ಟಾಪ್ ಸುದ್ದಿಗಳು ಖೋ ಖೋ ವಿಶ್ವಕಪ್ ನಲ್ಲಿ ಕೀರ್ತಿಪತಾಕೆ ಹಾರಿಸಿದ ಕ್ರೀಡಾಪಟು ಬಿ ಚೈತ್ರಾ

ಖೋ ಖೋ ವಿಶ್ವಕಪ್ ನಲ್ಲಿ ಕೀರ್ತಿಪತಾಕೆ ಹಾರಿಸಿದ ಕ್ರೀಡಾಪಟು ಬಿ ಚೈತ್ರಾ

►ಮೈಸೂರಿನ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಯಶೋಗಾಥೆ

ಮೈಸೂರು: ಭಾರತದ ಮಹಿಳಾ ಖೋಖೋ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನವದೆಹಲಿಯಲ್ಲಿ ಭಾನುವಾರ ನಡೆದ ಖೋ ಖೋ 2025 ರಲ್ಲಿ ಮಹಿಳಾ ತಂಡ ಅಭೂತಪೂರ್ವ ಗೆಲವು ಸಾಧಿಸಿದೆ.

ಈ ಟೂರ್ನಿಯಲ್ಲಿ ಕರ್ನಾಟಕದ ಕ್ರೀಡಾಪಟು ಅದರಲ್ಲೂ ನಮ್ಮ ಹೆಮ್ಮೆಯ ಮೈಸೂರಿನ ಕ್ರೀಡಾಪಟು ಬಿ ಚೈತ್ರಾ ಭಾಗವಹಿಸಿ ಉತ್ತಮ ಆಟವಾಡಿ ಸಾಧನೆ ಗೈದಿದ್ದಾಳೆ.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತದ ಪುರುಷರ ತಂಡ 54-36 ಅಂಕಗಳಿಂದ ನೇಪಾಳ ತಂಡವನ್ನು ಸೋಲಿಸಿದರೆ, ಭಾರತ ಮಹಿಳಾ ತಂಡ 78-40 ಅಂಕಗಳಿಂದ ನೇಪಾಳ ಮಹಿಳಾ ತಂಡವನ್ನು ಮಣಿಸಿ ವಿಜಯೋತ್ಸವ ಆಚರಿಸಿದವು.

ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ ಚೈತ್ರಾ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದಾರೆ. ಚೈತ್ರಾ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದವರು. ಗ್ರಾಮದ ರೈತ ದಂಪತಿ ಬಸವಣ್ಣ ಮತ್ತು ನಾಗರತ್ನ ಅವರ ಪುತ್ರಿ. ತನ್ನ ಊರಲ್ಲಿ ಖೋ ಖೋ ಆಡಲು ಪ್ರಾರಂಭಿಸಿದ ಚೈತ್ರಾ ಇಂದು ಅಪರೂಪದ ಸಾಧನೆ ಮಾಡಿ ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕ್ರೀಡೆಯ ಬಗೆಗಿನ ಅವರ ಸಮರ್ಪಣೆ ಅವರನ್ನು ರಾಜ್ಯ ಮತ್ತು ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುವಂತೆ ಮಾಡಿ ಎಲ್ಲರಿಗೂ ಸ್ಪೂರ್ತಿಯಾಗಿದೆ.

ಚೈತ್ರಾರ ಕುಟುಂಬ ಅವರ ಶಾಲಾ ಶುಲ್ಕವನ್ನು ಸಹ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿತ್ತು. ಆದ ಕಾರಣ ಆಕೆಯನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಆದರೂ ಅವರ ಕುಟುಂಬದ ಸ್ನೇಹಿತರೊಬ್ಬರು ಚೈತ್ರಾರ ಬುದ್ಧಿವಂತಿಕೆ, ಆಸಕ್ತಿ ಗಮನಿಸಿ ಅವರನ್ನು ಖಾಸಗಿ ಶಾಲೆಗೆ ಸೇರಿಸಲು ಸಲಹೆ ನೀಡಿದರು. ಕಷ್ಟದ ನಡುವೆಯೂ ಮಗಳ ಭವಿಷ್ಯಕ್ಕಾಗಿ ಪೋಷಕರು ಚೈತ್ರರನ್ನು ಕುರುಬೂರಿನ ವಿದ್ಯಾದರ್ಶಿನಿ ಶಾಲೆಗೆ ಸೇರಿಸಿದರು.

ಚೈತ್ರ ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರದ ಶ್ರೀ ಶಂಭುಲಿಂಗೇಶ್ವರ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಪಿ.ಇಡಿ (ದೈಹಿಕ ಶಿಕ್ಷಣದಲ್ಲಿ ಪದವಿ) ಓದುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಟಿ. ನರಸೀಪುರದ ವಿದ್ಯೋದಯ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಮತ್ತು ಟಿ. ನರಸೀಪುರದ ಪಿಆರ್ಎಂ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಚೈತ್ರಾ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಿಂದೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಖೋ ಖೋ ಚಾಂಪಿಯನ್ಶಿಪ್ -2022 ರಲ್ಲಿ ಚಿನ್ನದ ಪದಕ ಗೆದ್ದ ಮೈಸೂರು ವಿಶ್ವವಿದ್ಯಾಲಯದ ಮಹಿಳಾ ಖೋ ಖೋ ತಂಡದ ಸದಸ್ಯರಾಗಿದ್ದರು.

ಖೋ ಖೋ ಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್ಐ) ಸ್ಥಾಪಿಸಿದ ಇಲಾ ಪ್ರಶಸ್ತಿ – 2017 (ಅತ್ಯುತ್ತಮ ಸಬ್-ಜೂನಿಯರ್ ಆಟಗಾರ್ತಿ) ಪುರಸ್ಕೃತರಾಗಿದ್ದಾರೆ. ಚೈತ್ರ, ಹಿರಿಯ ರಾಷ್ಟ್ರೀಯ ಪಂದ್ಯಾವಳಿ, ಖೇಲೋ ಇಂಡಿಯಾ ಚಾಂಪಿಯನ್ಶಿಪ್ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ (ಎರಡು ಬಾರಿ) ರಾಜ್ಯವನ್ನು ಪ್ರತಿನಿಧಿಸಿದ್ದರು. ಚೈತ್ರಾ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಖೋ ಖೋ ಪಂದ್ಯಾವಳಿಗೆ ಅರ್ಹತೆ ಪಡೆದ ಮಂಡ್ಯ ವಿಶ್ವವಿದ್ಯಾಲಯದ ಮಹಿಳಾ ಖೋ ಖೋ ತಂಡದ ಭಾಗವೂ ಆಗಿದ್ದರು.
ಚೈತ್ರ ತವರು ಟಿ ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಸಂಭ್ರಮ ಮನೆಮಾಡಿದ್ದು , ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Join Whatsapp
Exit mobile version