ಬೆಂಗಳೂರು: FDA ನೇಮಕಾತಿ ಅಕ್ರಮಕ್ಕೆ ಸಾಕ್ಷಿ ಎಂಬಂತೆ ಲಂಚ ನೀಡಿರುವ ಬಗ್ಗೆ ಆಡಿಯೋ ಬೆಳಕಿಗೆ ಬಂದಿದೆ, ಇದುವರೆಗೂ ಸರ್ಕಾರದ ಯಾವೊಬ್ಬ ಸಚಿವರೂ ಈ ಬಗ್ಗೆ ಮಾತಾಡಿಲ್ಲ. ತನಿಖೆಗೆ ಒಪ್ಪಿಸುವ ಬಗ್ಗೆ ಚಕಾರವೆತ್ತಿಲ್ಲ. ವ್ಯಾಪಾರ ಸೌಧವಾಗಿರುವ ವಿಧಾನಸೌಧದಲ್ಲಿ ಎಲ್ಲ ಸರ್ಕಾರಿ ಹುದ್ದೆಗಳೂ ಮಾರಾಟದ ಸರಕುಗಳೇ ಆಗಿವೆ! ಎಂದು ಕಾಂಗ್ರೆಸ್ ಆರೋಪಿಸಿದೆ.
ಇತರ ಸರ್ಕಾರಗಳು ಮಾಡಿದ ಯೋಜನೆಗಳಿಗೆ ಹೆಸರು ಬದಲಿಸುವುದು, ಕ್ರೆಡಿಟ್ ತೆಗೆದುಕೊಳ್ಳುವುದನ್ನೇ ಚಾಳಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀತಾಗಳನ್ನು ತರಲು ಯಾರೂ ಪ್ರಯತ್ನಿಸಲೇ ಇಲ್ಲ ಎಂದಿದ್ದರು. ಚೀತಾಗಳು ಭಾರತಕ್ಕೆ ಬರುವ ಹಿಂದಿರುವ ಕಾಂಗ್ರೆಸ್ ಪ್ರಯತ್ನಗಳನ್ನು ಪ್ರಧಾನಿ ಅರಿಯಲಿ, ನಂತರ ಕ್ಯಾಮೆರಾ ಹಿಡಿದು ಪೋಸ್ ಕೊಡಲಿ ಎಂದು ಕಿಡಿಕಾರಿದೆ.
#40PercentSarkara ದ ಕುಖ್ಯಾತಿ ದೇಶದೆಲ್ಲೆಡೆ ಪಸರಿಸಿದೆ! ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಇದ್ದ ಪ್ರಜ್ಞಾವಂತರ ನಾಡು, ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ. ಭ್ರಷ್ಟಾಚಾರದ ಮಹಾಪೋಷಕರಾದ ಸಿಎಂಗೆ ತೆಲಂಗಾಣದಲ್ಲಿನ ಈ ಬೋರ್ಡ್‌ಗಳನ್ನು ವಿರೋಧಿಸುವ ದಮ್ ಇಲ್ಲದಾಗಿದೆ ಎಂದು ಬೊಮ್ಮಾಯಿ ವಿರುದ್ಧ ತೆಲಂಗಾಣದಲ್ಲಿ ಹಾಕಿದ್ದ ಫ್ಲೆಕ್ಸ್ ಪ್ರಸ್ತಾಪಿಸಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.