ಬೆಂಗಳೂರು: ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಚರ್ಚಿಸಿ ಎಸ್.ಟಿ.ಮೀಸಲಾತಿ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.
ನಗರದ ಚಾಮುಂಡೇಶ್ವರಿ ಸ್ಟುಡಿಯೋ ಸಭಾಂಗಣದಲ್ಲಿ ಕಾಡುಗೊಲ್ಲರ ರಾಜ್ಯಮಟ್ಟದ ಸಭೆಯಲ್ಲಿ ಕಾಡುಗೊಲ್ಲ ಸಮುದಾಯದ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಡುಗೊಲ್ಲ ಸಮುದಾಯಕ್ಕೆ ಸೂಕ್ತ ರೀತಿಯಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನ, ಸೌಲಭ್ಯ ಕಲ್ಪಿಸುವ ಸಲುವಾಗಿ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಕಾಡುಗೊಲ್ಲರ ನೋವಿನ ಜೀವನ ಪದ್ದತಿ ಮತ್ತು ಜೀವನಶೈಲಿ ನೂರಾರು ವರ್ಷದ ಇತಿಹಾಸವನ್ನು ಎಲ್ಲರಿಗೂ ತಿಳಿಸಬೇಕಿದೆ. ಇವರ ಸಂಸ್ಕೃತಿಯಲ್ಲಿ ಸಿರಿತನವಿದೆ, ಮನುಕುಲಕ್ಕೆ ಸಹಕಾರಿಯಾಗಿ ಬಾಳುವೆ ಮಾಡುವ ಕಾಡುಗೊಲ್ಲರು. ಸ್ವಾತಂತ್ರ್ಯ ದೊರೆತ ನಂತರವೂ ನಮ್ಮನ್ನು ಆಳಿದ ಸರ್ಕಾರಗಳು ಕಡೆಗಣಿಸಿವೆ. 1807 ರಲ್ಲಿಯೇ ಬುಕನ್ ಸಮಿತಿ ಕಾಡುಗೊಲ್ಲರನ್ನು ಬುಡಕಟ್ಟು ಜನಾಂಗ ಎಂದು ವರದಿ ನೀಡಿದೆ. ಆದರೆ ರಾಜಕೀಯ ತೀರ್ಮಾನ ಮಾಡಲು ಸಾಧ್ಯವಾಗಿಲ್ಲ. ಇವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.
ಮೈಸೂರು ವಿಶ್ವವಿದ್ಯಾಲಯ ಕಾಡುಗೊಲ್ಲ ಸಮಾಜದ ಇತಿಹಾಸವನ್ನು ಸಂಗ್ರಹಿಸಲಾಗಿದೆ. ಈ ಕುರಿತಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಾಡುಗೊಲ್ಲರು ವಾಸಿಸುವ ಪ್ರದೇಶವನ್ನು ಕಂದಾಯ ಗ್ರಾಮಗಳಾಗಿ ಮಾಡಿ ಹಕ್ಕು ಪತ್ರ ನೀಡಬೇಕು.
ಕಾಡುಗೊಲ್ಲರ ಅಭಿವೃದ್ದಿಗಾಗಿ ಸರ್ಕಾರ 15ಎಕರೆ ಜಮೀನು ನೀಡುವಂತೆ ಮನವಿ ಮಾಡಲಾಗಿದೆ. ಕಾಡುಗೊಲ್ಲರ ಜೀವನಪದ್ದತಿ, ಆರ್ಥಿಕ ಸ್ಥಿತಿ, ಜೀವನ ಶೈಲಿ ರಾಷ್ಟಕ್ಕೆ ತಿಳಿಯಬೇಕು ಎಂದರು.
ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಜನಾಂಗ ವಾಸಿಸುವ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾಡಬೇಕು , ಮೂಲಭೂತ ಸಮಸ್ಯೆಗಳು ಮತ್ತು ಹಕ್ಕು ಪತ್ರ ನೀಡಬೇಕು ಎಂದರು.
ಬುಡಕಟ್ಟು ಜನಾಂಗ ತಮ್ಮದೇ ಅಚರಣೆ, ಸಂಸ್ಕೃತಿ, ಸಂಪ್ರಾದಯ ಉಳಿಸಿಕೊಂಡು ಕಾಡಿನ ಅಂಚಿನಲ್ಲಿ ಹಟ್ಟಿಗಳನ್ನು ಕಟ್ಟಿಕೊಂಡು ವಾಸಿಸುತ್ತಿದೆ. ಹಿಂದೂ ಸಂಪ್ರದಾಯ ಹೊರತಾಗಿ ಬುಡಕಟ್ಟು ಸಂಪ್ರದಾಯ ಪಾಲಿಸುತ್ತಿದೆ. ಕಾಡುಗೊಲ್ಲ ಸಮುದಾಯಕ್ಕೆ ಶಿಕ್ಷಣ ವ್ಯವಸ್ಥೆ, ವಸತಿ ಸೌಲಭ್ಯ, ಉದ್ಯೋಗಾವಕಾಶ ಸಿಗುವಂತೆ ಮಾಡಲು ಹಾಗೂ ಕಾಡುಗೊಲ್ಲ ಸಮುದಾಯದ ಜೀವನ ವಾಸ್ತವ ಚಿತ್ರಣ ತೊರಿಸಲು ಸಾಕ್ಷ್ಯ ಚಿತ್ರ ಸಿದ್ಧಪಡಿಸಲಾಗಿದೆ. ಚಿತ್ರದುರ್ಗ, ತುಮಕೂರು ಪಾವಗಡ, ಶಿರಾ, ಕೂಡ್ಲಗಿ, ಕೊರಟಗೆರೆ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.
ಕಾಡು ಗೊಲ್ಲ ಜನಾಂಗದ ಡೊಡ್ಡನಾಗಯ್ಯ ಮಾತನಾಡಿ* ಕಾಡುಗೊಲ್ಲರು ಜನಜೀವನ,ಸ್ಥಿತಿಗತಿಗಳನ್ನು ಸಮಾಜಕ್ಕೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಸಾಕ್ಷ್ಯ ಚಿತ್ರ ಮಾಡಲಾಗಿದೆ. ಮಾದಿಗ, ಕಾಡುಗೊಲ್ಲರ ಸಂಸ್ಕೃತಿ ಸಂಪ್ರಾದಯ ಒಂದೇ ರೀತಿಯಲ್ಲಿದೆ. ಎಸ್.ಟಿ.ಸಮುದಾಯದಕ್ಕೆ ಕಾಡುಗೊಲ್ಲರ ಸಮುದಾಯದವನ್ನು ಸೇರ್ಪಡೆ ಮಾಡುವ ತನಕ ಅವಿರತ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕಾಡುಗೊಲ್ಲ ಸಮುದಾಯದ ಮಾಜಿ ಶಾಸಕರಾದ ಉಮಾಪತಿ, ಹಿರಿಯ ಮುಖಂಡರಾದ ಮಹಲಿಂಗಪ್ಪ ,ದೇವರಾಜು, ಬಸವರಾಜ್ ,ತಿಮ್ಮಯ್ಯ ,ಗುರುಲಿಂಗಯ್ಯ, ಸಿದ್ದೇಶ್, ಮುರುಳಿ,ಡೊಡ್ಡಪ್ಪ, ವಿಶ್ವನಾಥ,ರಂಗಸ್ವಾಮಿ,
ಪೂಜಾರಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.