ಲಖನೌ: ಬಿಜೆಪಿ ಸರ್ಕಾರದ ಆಡಳಿತದಲ್ಲಿ ಉತ್ತರ ಪ್ರದೇಶವು ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಬಿಜೆಪಿಯಲ್ಲಿರುವ ದಲಿತ ನಾಯಕರಿಗೆ ನಿಜವಾದ ಅಧಿಕಾರವನ್ನು ಎಂದಿಗೂ ನೀಡಲಾಗುವುದಿಲ್ಲ, ಅಧಿಕಾರ ಆಯ್ದ ಕೆಲವರ ಕೈಗೆ ಮಾತ್ರ ಸಿಗುತ್ತದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ದಲಿತರ ಮೇಲೆ ವಿಶೇಷವಾಗಿ ದಲಿತ ಮಹಿಳೆಯರ ಮೇಲೆ ಏಕೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಮೂಲಭೂತವಾಗಿ ಸರ್ವಾಧಿಕಾರಿಗಳ ಪಕ್ಷವಾಗಿದ್ದು, ಅದರ ಸದಸ್ಯರು ಊಳಿಗಮಾನ್ಯ ಮನಸ್ಥಿತಿಯವರಾಗಿದ್ದಾರೆ. ಪಕ್ಷದಲ್ಲಿ ಬಡವರು, ಅಳಿವಿನ ಅಂಚಿನಲ್ಲಿರುವವರು, ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ಅವಮಾನ ಮತ್ತು ದಬ್ಬಾಳಿಕೆ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.