Home Uncategorized ಕೊಡಗು ರೆಡ್ ಕ್ರಾಸ್ ನಿಂದ ಕೋವಿಡ್ ಸಂಕಷ್ಟದಲ್ಲಿನ ಫಲಾನುಭವಿಗಳಿಗೆ ನೆರವು

ಕೊಡಗು ರೆಡ್ ಕ್ರಾಸ್ ನಿಂದ ಕೋವಿಡ್ ಸಂಕಷ್ಟದಲ್ಲಿನ ಫಲಾನುಭವಿಗಳಿಗೆ ನೆರವು

ಮಡಿಕೇರಿ: ಕೋವಿಡ್-19 ಮೂರನೇ ಅಲೆಯು ಮಾರ್ಚ್ ಅಂತ್ಯದವರೆಗೂ ಇರುವ ಸಾಧ್ಯತೆ ಇದೆ. ಆದ್ದರಿಂದ  ಜನರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕರೆ ನೀಡಿದ್ದಾರೆ.

ನಗರದ ಬಾಲಭವನದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ರೆಡ್ ಕ್ರಾಸ್ ಘಟಕದ ವತಿಯಿಂದ ಕೋವಿಡ್ ಸಂತ್ರಸ್ತರ  ಕುಟುಂಬಗಳಿಗೆ ಹೊಲಿಗೆ ಯಂತ್ರ ಹಾಗೂ ದಿನಸಿ ಕಿಟ್ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕೊಡಗಿನಲ್ಲಿ ಕೋವಿಡ್ ಸೋಂಕಿಗೆ ಈವರೆಗೆ 438 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೆಲವರು ಮನೆಯಲ್ಲಿಯೇ ಸ್ವಯಂ ಚಿಕಿತ್ಸೆ ಪಡೆದು ಸಾವನ್ನಪ್ಪಿದ್ದಾರೆ. ಇಂಥ ಪ್ರಕರಣ ಹೊರತುಪಡಿಸಿ ಕೋವಿಡ್ ನಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 331 ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಹಾಗೂ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಾವನ್ನಪ್ಪಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆದೇಶಿದ ಹಿನ್ನಲೆಯಲ್ಲಿ ಅಂತಹ ಪ್ರಕರಣಗಳನ್ನೂ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕೋವಿಡ್ ಸೋಂಕು ಜಗತ್ತನ್ನೇ ವ್ಯಾಪಿಸಿದ ಬಳಿಕ ಜನಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯಾಗುತ್ತಲೇ ಇದೆ. ಇದೀಗ ಕೋವಿಡ್ನ ೩ನೇ ಅಲೆ ಪ್ರಾರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಾಯ್ದುಕೊಂಡು ಕೋವಿಡ್ ನಿಯಮಾವಳಿಗಳನ್ನು ಶಿಸ್ತುಬದ್ದವಾಗಿ ಪಾಲಿಸಬೇಕಾಗಿದೆ ಎಂದರು.

ಪ್ರಸ್ತುತ 15-18 ನೇ ವಯಸ್ಸಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಮಾರ್ಚ್ ನಿಂದ 12-14 ನೇ ವಯಸ್ಸಿನ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಲಸಿಕೆ ಮೂಲಕ ಕೋವಿಡ್ ಸೋಂಕಿನ ತೀವ್ರತೆಯನ್ನು ಕಡಿಮೆಮಾಡುವ ಉದ್ದೇಶ ಆರೋಗ್ಯ ಇಲಾಖೆಯದ್ದಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ಕೋವಿಡ್ನಿಂದ ತಂದೆ, ತಾಯಿಯರನ್ನು ಕಳೆದುಕೊಂಡ ಮಕ್ಕಳ ಪೋಷಣೆಯ ಹೊಣೆಯನ್ನು ಸರ್ಕಾರವೇ ವಹಿಸಿಕೊಳ್ಳುತ್ತಿದೆ ಎಂದರು.

Join Whatsapp
Exit mobile version