ಮೈಸೂರು: ರಾಜ್ಯದಲ್ಲಿ ಇನ್ನೇನೋ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನಾನು ಸ್ಪರ್ಧಿಸುವುದು ನಿಶ್ಚಿತ. ಕ್ಷೇತ್ರ ಯಾವುದು ಎನ್ನುವುದನ್ನು ತಿಂಗಳಾಂತ್ಯದಲ್ಲಿ ಪ್ರಕಟಿಸುತ್ತೇನೆ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜಮಖಂಡಿ, ಬಾಗಲಕೋಟೆ, ಧಾರವಾಡ ನಗರ, ಶೃಂಗೇರಿ, ಕಾರ್ಕಳ ಈ ಕ್ಷೇತ್ರಗಳಲ್ಲಿ ಒಂದು ಆಯ್ಕೆ ಮಾಡಲಿದ್ದೇನೆ. ಬಿಜೆಪಿಯಿಂದ ಟಿಕೆಟ್ ಕೇಳಿದ್ದೇನೆ. ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಹಿಂದುತ್ವದ ಕಾರ್ಯಸೂಚಿಯ ಮೇಲೆ ಗೆಲ್ಲುವ ವಿಶ್ವಾಸವಿದೆ’ ಎಂದರು.
‘ನಾವು ಬಿಜೆಪಿಯಿಂದ 25 ಕ್ಷೇತ್ರಗಳಲ್ಲಿ ಟಿಕೆಟ್ ಕೋರಿದ್ದೇವೆ. ಈ ಪೈಕಿ ಐವರು ಸ್ವಾಮೀಜಿಗಳಿಗೂ ಕೇಳಿದ್ದೇವೆ. ಕೊಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲಿದ್ದೇವೆ’ ಎಂದು ಹೇಳಿದರು. ಪರಿಶಿಷ್ಟರಿಗೆ, ಮಹಿಳೆಯರಿಗೆ ಮೀಸಲು ಇರುವಂತೆ ಬಿಜೆಪಿಯಲ್ಲಿ ಹಿಂದೂಗಳಿಗೂ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.