Home ಕ್ರೀಡೆ ಏಷ್ಯಾ ಕಪ್‌| ಸಾಂಪ್ರದಾಯಿಕ ಎದುರಾಳಿಗಳ ಕದನಕ್ಕೆ ಕ್ಷಣಗಣನೆ

ಏಷ್ಯಾ ಕಪ್‌| ಸಾಂಪ್ರದಾಯಿಕ ಎದುರಾಳಿಗಳ ಕದನಕ್ಕೆ ಕ್ಷಣಗಣನೆ

ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಕದನದಲ್ಲಿ ಎಲ್ಲರ ಗಮನ ಸೆಳೆದಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ತಾನ ತಂಡಗಳ ನಡುವಿನ ಮಹತ್ವದ ಪಂದ್ಯ ಭಾನುವಾರ ನಡೆಯಲಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಪಂದ್ಯ, ಉಭಯ ತಂಡಗಳ ಪಾಲಿಗೂ, ಅಭಿಮಾನಿಗಳ ಪಾಲಿಗೂ ಅತ್ಯಂತ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ 10 ತಿಂಗಳುಗಳ ಹಿಂದೆ ಪಾಕಿಸ್ತಾನ, ವಿರಾಟ್‌ ಕೊಹ್ಲಿ ನೇತೃತ್ವದ ಟೀಮ್‌ ಇಂಡಿಯಾವನ್ನು 10 ವಿಕೆಟ್‌ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತ್ತು. ಟೀಮ್‌ ಇಂಡಿಯಾ ನೀಡಿದ್ದ 152 ರನ್‌ಗಳ ಸವಾಲನ್ನು ಪಾಕಿಸ್ತಾನ ಯಾವುದೇ ವಿಕೆಟ್‌ ಕಳೆದುಕೊಳ್ಳದೆ ಚೇಸ್‌ ಮಾಡಿತ್ತು. ಆ ಪಂದ್ಯ ನಡೆದಿದ್ದ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಯೇ ಇದೀಗ ಮತ್ತೆ ಭಾರತ- ಪಾಕ್‌ ಮುಖಾಮುಖಿಯಾಗುತ್ತಿವೆ.

ಏಷ್ಯಾಕಪ್‌ನಲ್ಲಿ ಭಾರತದ ಪಾರುಪತ್ಯ

ಏಷ್ಯಾಕಪ್ ಟೂರ್ನಿಯ 14 ಆವೃತ್ತಿಗಳಲ್ಲಿ ಭಾರತ ಅತಿಹೆಚ್ಚು ಬಾರಿ (7) ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ 2000 ಮತ್ತು 2012ರ ಆವೃತ್ತಿಗಳಲ್ಲಿ ಪ್ರಶಸ್ತಿ ಜಯಿಸಿದೆ. ಶ್ರೀಲಂಕಾ ತಂಡ ಐದು ಬಾರಿ ಏಷ್ಯನ್‌ ಚಾಂಪಿಯನ್‌ ಪಟ್ಟವನ್ನೇರಿದೆ. 2016, 2018ರಲ್ಲಿ ಚಾಂಪಿಯನ್ ಆಗಿದ್ದ ಭಾರತ, ಈ ಬಾರಿ ಹ್ಯಾಟ್ರಿಕ್ ಪ್ರಶಸ್ತಿ ಜೊತೆ ಒಟ್ಟಾರೆ 8ನೇ ಬಾರಿಗೆ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಬುಮ್ರಾ, ಅಫ್ರೀದಿ ಗೈರು

ಟೂರ್ನಿ ಆರಂಭಕ್ಕೂ ಮುನ್ನವೇ ಉಭಯ ತಂಡಗಳ ಮ್ಯಾಚ್‌ ವಿನ್ನಿಂಗ್‌ ಬೌಲರ್‌ʼಗಳು ತಂಡದಿಂದ ಹೊರಗುಳಿದಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ಭಾರತದ ಜಸ್‌ಪ್ರೀತ್‌ ಬುಮ್ರಾ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಮತ್ತೊಂದೆಡೆ ಮೊಣಕಾಲು ಗಾಯದ ಕಾರಣ ಪಾಕಿಸ್ತಾನ ತಂಡದ ಪ್ರಮುಖ ಬೌಲರ್‌ ಶಾಹಿನ್‌ ಅಫ್ರಿದಿ ಈಗಾಗಲೇ ಏಷ್ಯಾ ಕಪ್‌ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದ ವೇಳೆ ಶಾಹಿನ್‌ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಯಾವುದೇ ಪಂದ್ಯಗಳಲ್ಲೂ ಅವರು ತಂಡದ ಭಾಗವಾಗಿಲ್ಲ. ಅದಾಗಿಯೂ ಶಾಹಿನ್‌, ದುಬೈನಲ್ಲಿ ತಂಡದ ಜೊತೆಗೆ ಉಳಿದಿದ್ದಾರೆ.

Join Whatsapp
Exit mobile version