Home ಕ್ರೀಡೆ AAC: ಚಿನ್ನದ ಪದಕಕ್ಕೆ ‘ಗುರಿ’ಯಿಟ್ಟ ಜ್ಯೋತಿ ಸುರೇಖಾ

AAC: ಚಿನ್ನದ ಪದಕಕ್ಕೆ ‘ಗುರಿ’ಯಿಟ್ಟ ಜ್ಯೋತಿ ಸುರೇಖಾ

ಢಾಕಾ: ಏಷ್ಯನ್‌ ಆರ್ಚರಿ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ರೋಚಕ ಫೈನಲ್ ಹಣಾಹಣಿಯಲ್ಲಿ ಭಾರತದ ಜ್ಯೋತಿ ಸುರೇಖಾ ವೆಣ್ಣಂ ಚಿನ್ನದ ಪದಕಕ್ಕೆ ‘ಗುರಿ’ಯಿಟ್ಟಿದ್ದಾರೆ.

ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯನ್‌ ಆರ್ಚರಿ ಚಾಂಪಿಯನ್‌ಷಿಪ್‌ನ ಫೈನಲ್‌ ಹಣಾಹಣಿಯಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬೆಳ್ಳಿ ಪದಕ ಗೆದ್ದಿರುವ ಜ್ಯೋತಿ 146-145, ಒಂದು ಅಂಕಗಳ ಅಂತರದಲ್ಲಿ ಕೊರಿಯಾದ ಓಹ್‌ ಯೂಹ್ಯೂನ್‌ ಎದುರು ರೋಚಕ ಜಯಗಳಿಸಿದರು.  

ಸೆಮಿಫೈನಲ್’ನಲ್ಲಿ 2015ರ ವಿಶ್ವ ಚಾಂಪಿಯನ್ ಕಿಮ್ ಯುನ್’ಹಿ’ರನ್ನು 148-143 ಅಂಕಗಳ ಅಂತರದಲ್ಲಿ ಹಿಮ್ಮೆಟ್ಟಿಸಿದ್ದ ಜ್ಯೋತಿ ಸುರೇಖಾ ವೆಣ್ಣಂ, ಇದೀಗ ಏಷ್ಯನ್‌ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

ಎರಡು ಅಂಕಗಳ ಮುನ್ನಡೆಯೊಂದಿಗೆ ಅಂತಿಮ ಸುತ್ತಿನಲ್ಲಿ ಕಣಕ್ಕೆ ಇಳಿದ ವಿಶ್ವ ಕ್ರಮಾಂಕದಲ್ಲಿ 6ನೇ ಸ್ಥಾನದಲ್ಲಿರುವ ಜ್ಯೋತಿ ಒಂದು ಬಾರಿ 10 ಮತ್ತು ಎರಡು ಬಾರಿ 9ರ ರಿಂಗ್’ಗೆ ಗುರಿ ಇಟ್ಟರು.

ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಭಾರತದ  ಆರ್ಚರ್’ಗಳು ಕೊರಿಯಾ ಆರ್ಚರ್‌ಗಳಿಗೆ ಒಂದು ಅಂಕದ ಅಂತರದಲ್ಲಿ ಶರಣಾದರು.  ಕೊರಿಯಾದ ಕಿಮ್ ಯುನ್ಹಿ ಮತ್ತು ಚೊಯ್ ಯುಂಘೀ ಎದುರಿನ ಹಣಾಹಣಿಯಲ್ಲಿ ಜ್ಯೋತಿ ಮತ್ತು ರಿಷಭ್ ಯಾದವ್ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಕೊರಿಯಾ ಜೋಡಿ 155-154ರಲ್ಲಿ ಜಯ ಸಾಧಿಸಿತು. ತಂಡ ವಿಭಾಗದಲ್ಲಿ ಅಭಿಷೇಕ್ ಮತ್ತು ಅಮನ್ ಸೈನಿ ಜೊತೆಗೂಡಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

Join Whatsapp
Exit mobile version