ಬೆಂಗಳೂರು: ಶಿರವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಫಿ ಸಅದಿ ತಿಳಿಸಿದ್ದಾರೆ.
ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಯಾವ ಆಧಾರದಲ್ಲಿ ತೀರ್ಪು ಕೊಟ್ಟಿದೆ ಎಂಬುದು ಗೊತ್ತಿಲ್ಲ. ಆದರೆ ಸಂವಿಧಾನಬದ್ಧವಾಗಿ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಹೆಣ್ಣು ಮಕ್ಕಳು ಶಿರವಸ್ತ್ರ ಧರಿಸುವ ಬಗ್ಗೆ ಕುರಾನ್ ನಲ್ಲಿ ಸ್ಪಷ್ಟ ಉಲ್ಲೇಖವಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಉಲೆಮಾ ಒಕ್ಕೂಟದಿಂದ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದೆ. ಷರಿಯತ್ ಬದ್ಧವಾಗಿ ಅವರಿಗೆ ಶಿಕ್ಷಣ ಸಿಗಬೇಕಿದೆ. ಹೀಗಾಗಿ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.