►ಕೇವಲ ಕೇಶವಕೃಪಾದ ಮನವೊಲಿಸಲು ಮಸೂದೆ ತರಲಾಗಿದೆ
►ಸರ್ವಜನಾಂಗದ ಶಾಂತಿಯ ತೋಟದಲ್ಲಿ ಆರೆಸ್ಸೆಸ್ ನ ಕೆಟ್ಟ ಗೊಬ್ಬರ ಹಾಕಬೇಡಿ
►ಈ ಮಸೂದೆಯ ಕಾನೂನು ಮಾನ್ಯತೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ
ಬೆಂಗಳೂರು: ಮತಾಂತರ ನಿಷೇಧ ವಿಧೇಯಕ ಸ್ವಾತಂತ್ರ್ಯ ನೀಡುವ ವಿಧೇಯಕವಲ್ಲ, ಬದಲಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಕಸಿಯುವ ವಿಧೇಯಕವಾಗಿದೆ. ಈ ಮಸೂದೆ ಅಸಂವಿಧಾನಿಕವಾಗಿದ್ದು, ಸಂವಿಧಾನದ ಪರಿಚ್ಛೇದ 25ರಿಂದ 28ರವರೆಗೂ ಧರ್ಮದ ಆಚರಣೆ ಮತ್ತು ಪ್ರಚಾರದ ಹಕ್ಕನ್ನು ಕಸಿಯುತ್ತದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿಧೇಯಕದ ಉದ್ದೇಶ ಹಾಗೂ ಕಾರಣಗಳಲ್ಲಿ ಉಲ್ಲೇಖಿಸಿರುವಂತೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಆಮಿಷ, ಒತ್ತಾಯ, ವಂಚನೆ, ಸಾಧನಗಳ ಮೂಲಕ ಮಾಡಲಾದ ಮತಾಂತರಗಳು ಹೆಚ್ಚಾಗಿರುವುದನ್ನು ಗಮನಿಸಲಾಗಿದ್ದು, ಇದು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಮಾಡಿವೆ. ಇವುಗಳನ್ನು ತಡೆಗಟ್ಟಲು ಹಾಗೂ ಇಂತಹ ಕೃತ್ಯಗಳನ್ನು ಮಾಡುವವರಿಗೆ ಶಿಕ್ಷಿಸಲು ರಾಜ್ಯದಲ್ಲಿ ಯಾವುದೇ ಶಾಸನಗಳಿಲ್ಲ. ಹೀಗಾಗಿ ಈ ಕಾಯ್ದೆ ತರಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಇಲ್ಲಿ ಸರ್ಕಾರ ಬಲವಂತದ ಮತಾಂತರದ ಪ್ರಕರಣ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದು, ಸರ್ಕಾರದ ಬಳಿ ಈ ಬಲವಂತದ ಮತಾಂತರದ ಬಗ್ಗೆ ಅಂಕಿಅಂಶಗಳಿವೆಯೇ? ಕಳೆದ 3 ವರ್ಷಗಳಲ್ಲಿ ಎಷ್ಟು ಮತಾಂತರವಾಗಿದೆ ಎಂದು ಹೇಳಿದೆಯೇ? ಸದನದಲ್ಲಿ ಚರ್ಚೆ ಮಾಡುವಾಗ ಬಿಜೆಪಿ ಶಾಸಕರು ಹೊಸದುರ್ಗದಲ್ಲಿ ತಮ್ಮ ತಾಯಿಗೆ ಒತ್ತಾಯಪೂರ್ವಕವಾಗಿ ಮತಾತಂತರ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು. ತಹಶೀಲ್ದಾರ್ ಅವರು ತನಿಖೆ ವರದಿ ನೀಡಿದಾಗ ಅದರಲ್ಲಿ ತಾಲೂಕಿನಲ್ಲಿ ಎಲ್ಲಿಯೂ ಬಲವಂತದ ಮತಾಂತರ ಆಗಿಲ್ಲ ಎಂದು ತಿಳಿಸಲಾಗಿತ್ತು. ಆದರೆ ಸರ್ಕಾರ ಆ ತಹಶೀಲ್ದಾರರಿಗೆ ವರ್ಗಾವಣೆ ಮಾಡಿತು. 6 ತಿಂಗಳ ಹಿಂದೆ ಗೋವಿಂದ ಕಾರಜೋಳ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಅವರೇ ಪರಿಷತ್ ನಲ್ಲಿ ಮತಾಂತರಗೊಂಡವರ ಮಾಹಿತಿ ಇಲ್ಲವೆಂದು ಹೇಳಿಕೆ ನೀಡುತ್ತಾರೆ. ರಾಜ್ಯದಲ್ಲಿ ಬಲವಂತದ ಮತಾಂತರ ಹೆಚ್ಚಾಗಿದೆ ಎಂದು ಹೇಳುವ ಸರ್ಕಾರದ ಸಚಿವರೆ ಈ ಬಗ್ಗೆ ಅಂಕಿ ಅಂಶವಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ವಿಧೇಯಕದಲ್ಲಿ ಸೆಕ್ಷನ್ 3ರಲ್ಲಿ ತಪ್ಪು ನಿರೂಪಣೆ, ಬಲವಂತ, ವಂಚನೆ, ಮದುವೆ ವಾಗ್ದಾನದಿಂದ ಮಾಡುವ ಮತಾಂತರ ನಿಷೇಧ ಎಂದು ಹೇಳಲಾಗಿದೆ. ಆದರೆ ಕಾನೂನು ಸಚಿವರು ತಮ್ಮ ಹೇಳಿಕೆಯಲ್ಲಿ ಈ ಕಾಯ್ದೆ ಗುಜರಾತಿನಲ್ಲಿ ಜಾರಿಯಲ್ಲಿದ್ದು, ಅದನ್ನೇ ಇಲ್ಲಿ ಹಾಕಿದ್ದೇವೆ ಎಂದು ಹೇಳಿದ್ದಾರೆ. ಗುಜರಾತಿನಲ್ಲಿ ಇದೇ ಪ್ಯಾರ ಹಾಕಲಾಗಿದ್ದು, 2021ರಲ್ಲಿ ಇದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಆಮೀಷ ಎಂದು ಹೇಳಲಾಗಿರುವ ಅಂಶಗಳು ಸರಿಯಾಗಿಲ್ಲ. ಇದು ಅಂತರ್ ಜಾತಿ ವಿವಾಹಕ್ಕೆ ಅಡ್ಡಿಯಾಗಲಿದೆ ಎಂದು ತಡೆಯಾಜ್ಞೆ ನೀಡಿದೆ. ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ಸೆಕ್ಷನ್ 4ನಲ್ಲಿ ಮತಾಂತರಗೊಂಡವರ ಬಗ್ಗೆ ರಕ್ತ ಸಂಬಂಧಿಗಳ ಮಾತ್ರವಲ್ಲ, ಮೂರನೇ ವ್ಯಕ್ತಿ ಕೂಡ ದೂರು ನೀಡಿದರೆ ಆ ದೂರು ದಾಖಲಾಗುತ್ತದೆ ಎಂದು ತಿಳಿಸಲಾಗಿದೆ. ಇದು ನೈತಿಕ ಪೊಲೀಸ್ ಗಿರಿಯಾಗಿದ್ದು, ಸಂವಿಧಾನ ವಿರುದ್ಧವಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ದೂರು ಯಾರೇ ಕೊಟ್ಟರೂ ಈ ಪ್ರಕರಣವನ್ನು ಮತಾಂತರಗೊಂಡವರು ಸಾಬೀತುಪಡಿಸಬೇಕಾಗಿದೆ. ಇದು ಎಂತಹ ನ್ಯಾಯ ಹಾಗೂ ಕಾನೂನು? ಎಂದು ಅವರು ಪ್ರಶ್ನಿಸಿದರು.
ಯಾರಾದರೂ ಸ್ವಇಚ್ಛೆಯಿಂದ ಬೇರೆ ಧರ್ಮ ಪಾಲಿಸಬೇಕಾದರೆ, ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನೊಟೀಸ್ ನೀಡಿ ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ. ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕನ್ನು ಬಳಸಿಕೊಳ್ಳಲು ನಾವು ಸಚಿವಾಲಯ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಯಾಕೆ ಪಡೆಯಬೇಕು? ಹಾಗಿದ್ದರೆ, ಅಂಬೇಡ್ಕರ್ ಅವರು ಈ ಹಿಂದೆ ಹಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದು, ಅವರು ಈಗ ಮತಾಂತರ ಆಗಬೇಕಿದ್ದರೆ ವರ ಅನುಮತಿ ಪಡೆಯಬೇಕಿತ್ತೇ? ಅಂಬೇಡ್ಕರ್ ಅವರು ಯಾಕೆ ಆ ನಿರ್ಧಾರ ತೆಗೆದುಕೊಂಡರು? ಯಾವ ಧರ್ಮದಲ್ಲಿ ನಮ್ಮ ಸಮಾಜದವರಿಗೆ ಗೌರವ, ಘನತೆ, ಸಮಾನತೆ ಇಲ್ಲವೋ, ಪ್ರಾಣಿಗಳಿಗಿಂತ ಮನುಷ್ಯರನ್ನು ಕೀಳಾಗಿ ನೋಡುತ್ತಾರೆ ಎಂದು ಬೌದ್ಧ ಧರ್ಮ ಸ್ವೀಕರಿಸಿದರು.
ಅಂಬೇಡ್ಕರ್ ಅವರು 1935ರಲ್ಲಿ ಧರ್ಮಗಳು ಮಾನವನಿಗಾಗಿ ಇರಬೇಕೇ ಹೊರತು ಧರ್ಮಕ್ಕಾಗಿ ಮಾನವ ಇರಬಾರದು ಎಂದು ಹೇಳುತ್ತಾರೆ. ನೀವು ಮನುಷ್ಯರಾಗಿ ಗೌರವ ಪಡೆಯಬೇಕಾದರೆ, ಶಕ್ತಿಶಾಲಿಯಾಗಿ ಸಂಘಟಿತರಾಗಬೇಕಾದರೆ, ಸಮಾನತೆ ಪಡೆಯಬೇಕಾದರೆ ಮತಾಂತರವಾಗಬೇಕು. ನಿಮ್ಮನ್ನು ಮನುಷ್ಯರಂತೆ ಕಾಣದ, ಸಮಾನತೆ, ಗೌರವ ನೀಡಿದ ಧರ್ಮದಲ್ಲಿ ನೀವು ಯಾಕೆ ಇರಬೇಕು ಎಂದು ಕೇಳುತ್ತಾರೆ.
2021ರಲ್ಲಿ ತುಮಕೂರು ಸಂಸದರಿಗೆ ಹಳ್ಳಿಗೆ ಪ್ರವೇಶ ನೀಡಿಲ್ಲ. ಇದು ಧರ್ಮವೇ? ಹೀಗಿರುವಾಗ ಈ ಮಸೂದೆ ಯಾಕೆ ತಂದಿದ್ದಾರೆ? ಈ ಸರ್ಕಾರ ಬಸವಣ್ಣನವರ ಕೆಲಸವನ್ನು ತಪ್ಪು ಎಂದು ಹೇಳಲು ಹೊರಟಿದೆಯೇ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಇದು ಸರ್ಕಾರ ಪ್ರತಿಯೊಬ್ಬರ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಮಸೂದೆ. ಈ ಮಸೂದೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎ.ಪಿ ಶಾ ಅವರು, ‘ಈ ಕಾಯ್ದೆ ಸಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವಿದೆ. ಇದರ ದುರ್ಬಳಕೆಯಿಂದ ಜನರನ್ನು ಶೋಷಣೆ ಮಾಡುವ ಪ್ರಯತ್ನವಾಗಿದೆ’ ಎಂದು ತಿಳಿಸಿದ್ದಾರೆ.
ಇನ್ನು ಮತ್ತೋರ್ವ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮದನ್ ಬಿ ಲೋಕೂರ್ ಅವರು, ‘ಈ ಕಾಯ್ದೆಯಲ್ಲಿ ಸಂವಿಧಾನದ ಆಶಯ ಎತ್ತಿ ಹಿಡಿಯುವುದು ಅಸಾಧ್ಯ. ಇದರಿಂದ ಸಂವಿಧಾನದ ಹಕ್ಕನ್ನು ಕಸಿಯುತ್ತದೆ. ಈ ಕಾಯ್ದೆಯಲ್ಲಿ ಮತಾಂತರದ ಬಗ್ಗೆ ಮಾತ್ರ ಪ್ರಸ್ತಾಪ ಮಾಡಲಾಗಿದ್ದು, ಮರುಮತಾಂತರದ ಬಗ್ಗೆ ಮಾತನಾಡಿಲ್ಲ’ ಎಂದು ಪ್ರಶ್ನಿಸುತ್ತಾರೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ದೀಪಕ್ ಗುಪ್ತಾ ಅವರು, ‘ಈ ಮಸೂದೆ ಅಸಂವಿಧಾನಿಕವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಧಾರ್ಮಿಕ ಹಕ್ಕನ್ನು ಕಸಿಯುತ್ತಿದ್ದು, ಪ್ರತಿಯೊಬ್ಬರ ನಂಬಿಕೆ ವಿಚಾರದಲ್ಲಿ ಸರ್ಕಾರ ಯಾಕೆ ಹಸ್ತಕ್ಷೇಪಕ್ಕೆ ಮುಂದಾಗಿದೆ?’ ಎಂದು ಪ್ರಶ್ನಿಸಿದ್ದಾರೆ.
ಈ ಮಸೂದೆಯಲ್ಲಿ ಯಾರಾದರೂ ಸ್ವಇಚ್ಛೆಯಿಂದ ಮತಾಂತರ ಆಗಬೇಕಾದರೆ ಎರಡು ಅರ್ಜಿ ಸಲ್ಲಿಸಬೇಕು. ಒಂದು ಮತಾಂತರವಾಗುವ ಮುನ್ನ. ಮತ್ತೊಂದು ಮತಾಂತರ ಆದ ನಂತರ. ಇದರಲ್ಲಿ ಹೆಸರು, ಲಿಂಗ, ವಯಸ್ಸು, ತಂದೆ ತಾಯಿ ಹೆಸರು, ಆದಾಯ ಮಾಹಿತಿ ನೀಡಬೇಕು. ನಂತರ ಅವರು ಸಾರ್ವಜನಿಕ ನೊಟೀಸ್ ಬೋರ್ಡ್ ನಲ್ಲಿ ಹಾಕುತ್ತಾರೆ. ಈ ಮಾಹಿತಿ ಸಾರ್ವಜನಿಕವಾಗಿ ಪ್ರಕಟಿಸುವುದು ಕಾನೂನು ಬಾಹಿರ. ನಮ್ಮ ರಾಜ್ಯದಲ್ಲಿ ಕಾನೂನು ಇಲಾಖೆ ಸತ್ತಿದೆ ಎಂದು ಅವರು ಕಿಡಿಕಾರಿದರು.
ಹಾದಿಯಾ ಪ್ರಕರಣದಲ್ಲಿ ಖಾಸಗಿಕರಣದ ಹಕ್ಕು ನೀಡಿದೆ. ನಮ್ಮ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಯಾಕೆ ಪ್ರಕಟಿಸಬೇಕು? ನಿನ್ನೆ ಕಾನೂನು ಸಚಿವರು ನಾವು ಕತ್ತೆ ಕಾಯುತ್ತಿದ್ದೇವಾ ಎಂದು ಕೇಳಿದರು. ನನ್ನ ಪ್ರಕಾರ ಅವರು ನಿಜಕ್ಕೂ ಕತ್ತೆಯನ್ನೇ ಕಾಯುತ್ತಿದ್ದಾರೆ. ಇಲ್ಲವಾಗಿದ್ದರೆ ಇದೆಲ್ಲ ಯಾಕೆ ಆಗುತ್ತಿತ್ತು. ಆನ್ ಲೈನ್ ಬೆಟ್ಟಿಂಗ್ ಕಾಯ್ದೆ ತಂದ ನಂತರ ಅದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಹೌದು, ನೀವು ಕತ್ತೆ ಕಾಯುತ್ತಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದರು.
ಈ ಮಸೂದೆ ಈ ಎಲ್ಲ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಆಗುವುದಿಲ್ಲ ಎಂದು ಸರ್ಕಾರ ಬಹಿರಂಗವಾಗಿ ತಿಳಿಸಬೇಕು. ಗುಜರಾತ್, ಮಹರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಹಾದಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟನೆ ನೀಡಲಿ. ನಿಮ್ಮ ಬಳಿ ಬಲವಂತದ ಮತಾಂತರದ ದಾಖಲೆಗಳೇ ಇಲ್ಲ. ಕೇವಲ ಕೇಶವಕೃಪಾದ ಮನವೊಲಿಸಲು ಈ ಮಸೂದೆ ತಂದಿದ್ದಾರೆ. ಈ ಕಾನೂನಿನ ಮಾನ್ಯತೆಯನ್ನು ನಾವು ಪ್ರಶ್ನಿಸುತ್ತೇವೆ ಎಂದು ಖರ್ಗೆ ಹೇಳಿದರು.
ಇದು 40% ಕಮಿಷನ್, ಗುತ್ತಿಗೆದಾರರ ಸಂಘ, ರುಪ್ಸಾ ಕೊಟ್ಟಿರುವ ದೂರು, ಬೆಂಗಳೂರಿನಲ್ಲಿ ಆಗುತ್ತಿರುವ ಅವಾಂತರ, ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ, ರೈತರಿಗೆ ಮಾಡುತ್ತಿರುವ ದ್ರೋಹಗಳನ್ನು ಮುಚ್ಚಿಹಾಕಲು ಇಂತಹ ಮಸೂದೆ ಮಂಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ನಮಗೆ ಯುಪಿ ಹಾಗೂ ಮಧ್ಯಪ್ರದೇಶದ ಮಾದರಿ ತರುತ್ತಿದ್ದೀರಿ. ನಮ್ಮದು ಬುದ್ಧ, ಬಸವ, ಅಂಬೇಡ್ಕರ್ ಅವರ ನಾಡು. ಕುವೆಂಪು ಅವರ ವಿಶ್ವಮಾನವ ತತ್ವದ ಮೇಲೆ ನಡೆಯುತ್ತಿರುವ ನಾಡು. ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾಗ್ಪುರದ ಆರೆಸ್ಸೆಸ್ ನ ಕೆಟ್ಟ ಗೊಬ್ಬರ ಹಾಕಬೇಡಿ. ಈ ಮಸೂದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನಾವು ಕಾನೂನು ಹೋರಾಟದ ಪರಿಶೀಲನೆ ಮಾಡುತ್ತೇವೆ. ನಾವು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.