Home ಕರಾವಳಿ ರಮನಾಥ ರೈಗೆ ಮತ್ತೊಂದು ಟಾಸ್ಕ್: ಕೆಪಿಸಿಸಿ ಅಧ್ಯಕ್ಷರಿಂದ ಆದೇಶ

ರಮನಾಥ ರೈಗೆ ಮತ್ತೊಂದು ಟಾಸ್ಕ್: ಕೆಪಿಸಿಸಿ ಅಧ್ಯಕ್ಷರಿಂದ ಆದೇಶ

ಬೆಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ನೇತೃತ್ವ ವಹಿಸಿದ್ದ ಮಾಜಿ ಸಚಿವರಾದ ಕೆಪಿಸಿಸಿ ಉಪಾಧ್ಯಕ್ಷ ಬಿ. ರಮನಾಥ ರೈ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೊಂದು ಟಾಸ್ಕ್ ನೀಡಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಯಶಸ್ಸು ಕಂಡಿರುವ ರಮನಾಥ ರೈ ಅವರನ್ನು ಕರಾವಳಿಯ ಮತ್ತೊಂದು ಜಿಲ್ಲೆಯಲ್ಲಿ ಪ್ರಚಾರಕ್ಕೆ ನಿಯೋಜನೆ ಮಾಡಲಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳಕರ್ ಪರ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸುವಂತೆ ಮಾಜಿ ಸಚಿವ ರಮನಾಥ ರೈ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋರಿಕೊಂಡಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ಕೈಗೊಂಡು, ತಮ್ಮ ಅಪಾರ ರಾಜಕೀಯ ಅನುಭವ ಮತ್ತು ಚುನಾವಣಾ ತಂತ್ರಗಳನ್ನು ಧಾರೆಯೆರೆದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಕೆಪಿಸಿಸಿ ಅಧ್ಯಕ್ಷರು ಕೋರಿಕೊಂಡಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ (ಆಡಳಿತ) ಜಿ.ಸಿ ಚಂದ್ರಶೇಖರ್ ಅವರು ರಮನಾಥ ರೈ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ರಮನಾಥ ರೈ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ದ.ಕಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಭರ್ಜರಿ ಪ್ರಚಾರ ನಡೆಸಿದ್ದರು. ದ.ಕ. ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು

ರಮನಾಥ ರೈ ಅವರು ದ.ಕ ಲೋಕಸಭಾ ಕ್ಷೇತ್ರದಲ್ಲಿ
ಶ್ರಮವಹಿಸಿ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸಿ ರಮನಾಥ ರೈ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಕೋರಿಕೆಯಂತೆ ನಾಳೆಯಿಂದ ರಮನಾಥ ರೈ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಆರಂಭಿಸಲಿದ್ದಾರೆ ಎಂದು ಅವರ ಆಪ್ತಮೂಲಗಳಿಂದ ತಿಳಿದುಬಂದಿದೆ

ಮೇ 7ರಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Join Whatsapp
Exit mobile version