Home ಟಾಪ್ ಸುದ್ದಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಜೈಲಿನಲ್ಲಿ ದಾಂಧಲೆ !

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಜೈಲಿನಲ್ಲಿ ದಾಂಧಲೆ !

►ಆದಿತ್ಯ ರಾವ್ ವಿರುದ್ಧ ಮತ್ತೊಂದು ದೂರು ದಾಖಲು

ಶಿವಮೊಗ್ಗ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಆದಿತ್ಯ ರಾವ್ ವಿರುದ್ಧ ಜೈಲು ಅಧಿಕಾರಿಗಳೇ ದೂರು ದಾಖಲಿಸಿದ್ದಾರೆ.
ಸಾರ್ವಜನಿಕ ಸೊತ್ತು ಹಾನಿಗೊಳಿಸಿದ ಹಿನ್ನೆಲೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ಚೀಫ್ ಸೂಪರಿಂಟೆಂಡೆಂಟ್ ಅವರು ದೂರು ನೀಡಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಆದಿತ್ಯ ರಾವ್ ಮೇ 31ರಂದು ಮಧ್ಯಾಹ್ನ ಜೈಲಿನ ವಿಡಿಯೋ ಕಾನ್ಫರೆನ್ಸ್ ಕೊಠಡಿ ಬಳಿ ಬಂದು, ಇವತ್ತು ತನ್ನ ವಿಚಾರಣೆ ಇದೆಯೇ ಎಂದು ಪ್ರಶ್ನಿಸಿದ್ದ. ಅಲ್ಲಿದ್ದ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿ ಇಲ್ಲ ಎಂದು ಹೇಳಿದ್ದರು. ಬಳಿಕ ಸ್ವಲ್ಪ ದೂರ ಹೋಗಿದ್ದ ಆದಿತ್ಯ ಹಿಂದಕ್ಕೆ ಬಂದು ವಿ.ಸಿ.ಕೊಠಡಿಯಲ್ಲಿದ್ದ ಟಿವಿಗೆ ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದಾನೆ. ಅಷ್ಟರಲ್ಲಿ ಕೊಠಡಿಯಲ್ಲಿದ್ದ ಸಿಬ್ಬಂದಿ ಆದಿತ್ಯನನ್ನು ಹಿಡಿದಿದ್ದರು. ಆದರೆ ಅವರಿಂದ ತಪ್ಪಿಸಿಕೊಂಡು ಮತ್ತೊಂದು ಟಿವಿಯನ್ನು ಒಡೆದು ಹಾಕಿದ್ದಾನೆ. ಕೂಡಲೇ ಸಿಬ್ಬಂದಿ ಆದಿತ್ಯನನ್ನು ಹಿಡಿದು ಜೈಲರ್ ವಶಕ್ಕೆ ಒಪ್ಪಿಸಿದ್ದಾರೆ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


2020ರ ಜನವರಿ 20ರಂದು ಬೆಳಗ್ಗೆ ರಿಕ್ಷಾವೊಂದರಲ್ಲಿ ಚಾಲಕ ಸೇರಿದಂತೆ ಇಬ್ಬರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆ ಪೈಕಿ ಆದಿತ್ಯ ರಾವ್ ಆಟೋ ರಿಕ್ಷಾದಿಂದ ಇಳಿದು ಸ್ಫೋಟಕ ತುಂಬಿದ ಬ್ಯಾಗನ್ನು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಸಮೀಪದ ಟಿಕೆಟ್ ಕೌಂಟರ್ ಬಳಿಯಿರುವ ಆಸನದ ಮೇಲಿರಿಸಿ ಅಲ್ಲಿಂದ ಕಾಲ್ಕಿತ್ತಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಮಂಗಳೂರಿನಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆದಿತ್ಯ ರಾವ್ ಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ಈತ ಶಿವಮೊಗ್ಗ ಜೈಲಿನ ಶಿಕ್ಷಾ ಬಂಧಿಯಾಗಿದ್ದಾನೆ.

Join Whatsapp
Exit mobile version