ಬೇಲೂರು: ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಚರ್ಚ್ ವೊಂದಕ್ಕೆ ನುಗ್ಗಿ ದಾಂಧಲೆವೆಬ್ಬಿಸಿ ಅಲ್ಲಿದ್ದವರನ್ನು ಎಳೆದಾಡಿ ಅಗೌರವಯುತವಾಗಿ ವರ್ತಿಸಿದ ಘಟನೆ ಭಾನುವಾರ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಬಿಕ್ಕೋಡು ಬಳಿ ನಡೆದಿದೆ.
ಚರ್ಚ್ ವ್ಯವಸ್ಥಾಪಕ ಸುರೇಶ್ ಪಾಲ್ ಅವರ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಬಿಕ್ಕೋಡು ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿತ್ತು. ಪ್ರಾರ್ಥನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ವೇಳೆ ಏಕಾಏಕಿ ಆಗಮಿಸಿದ ಸಂಘಪರಿವಾರದ ಕಾರ್ಯಕರ್ತರು ಪ್ರಾರ್ಥನೆಗೆ ಅಡ್ಡಿ ಪಡಿಸಿ ಘೋಷಣೆ ಕೂಗಿದರು. ಪ್ರಾರ್ಥನೆನಿರತರು ನಮ್ಮನ್ನು ಇಲ್ಲಿ ಯಾರೂ ಬಲವಂತದಿಂದ ಕರೆತಂದಿಲ್ಲ. ನಾವಾಗಿ ಬಂದಿದ್ದೇವೆ ಎಂದು ಹೇಳಿದರೂ ಸಂಘಪರಿವಾರದ ಕಾರ್ಯಕರ್ತರು ಇಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಉಭಯ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ಸಂಘಪರಿವಾರ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆ ಕೂಗಿದರೆ, ಕ್ರೈಸ್ತ ಬಾಂಧವರು ಏಸು ಏಸು ಎಂದು ಘೋಷಣೆ ಕೂಗಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಘಪರಿವಾರದ ಕಾರ್ಯಕರ್ತರನ್ನು ಅಲ್ಲಿಂದ ಚದುರಿಸಿದರು.
ಈ ಬಗ್ಗೆ ವಿವರ ನೀಡಿದ ಚರ್ಚ್ ವ್ಯವಸ್ಥಾಪಕ ಸುರೇಶ್ ಪಾಲ್, ಪ್ರತಿ ವಾರದಂತೆ ಈ ಭಾನುವಾರವೂ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ಏರ್ಪಡಿಸಲಾಗಿತ್ತು. ಇಲ್ಲಿ ಯಾವುದೇ ರೀತಿಯ ಮತಾಂತರ ನಡೆಯುತ್ತಿಲ್ಲ. ಪ್ರಾರ್ಥನೆ ನಡೆಯುತ್ತಿರುವಾಗ ಕೆಲವರು ಏಕಾಏಕಿ ಚರ್ಚ್ ಗೆ ನುಗ್ಗಿ ಗೊಂದಲ ಸೃಷ್ಟಿಸಿದ್ದಾರೆ. ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.