ಅಂಕೋಲಾದಲ್ಲಿ ದರೋಡೆ ಪ್ರಕರಣ: ಮಂಗಳೂರು ಮೂಲದ ರೌಡಿಶೀಟರ್ ತಲ್ಲತ್, ನೌಫಾಲ್ ಕಾಲಿಗೆ ಪೊಲೀಸರಿಂದ ಗುಂಡೇಟು

- Advertisement -

ಹಳಿಯಾಳ: ಮಂಗಳೂರಿನ ಕುಖ್ಯಾತ ತಲ್ಲತ್ ಗ್ಯಾಂಗ್ ನ ರೌಡಿಶೀಟರ್ ತಲ್ಲತ್ ಮತ್ತು ಆತನ ಸಹಚರ ನೌಫಾಲ್ ಎಂಬವರ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ.

- Advertisement -

ಮಂಗಳೂರು ಮೂಲದ ರೌಡಿಶೀಟರ್ ತಲ್ಲತ್, ನೌಫಾಲ್ ಹಾಗೂ ಸಾಹಿಲ್ ಅವರನ್ನು ಮುಂಬಯಿಯಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಈ ಘಟನೆ ನಡೆದಿದೆ.

ಜನವರಿ 26ರಂದು ಅಂಕೋಲಾ ಬಳಿಯ ರಾಮನಗುಳಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ತಲ್ಲತ್, ನೌಫಾಲ್ ಮತ್ತು ಸಾಹಿಲ್ ಎಂಬವರನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದರು. ಆರೋಪಿಗಳನ್ನು ಅಂಕೋಲಾಕ್ಕೆ ಕರೆತರುವಾಗ ಹಳಿಯಾಳದ ಭಾಗವತಿ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದ ವೇಳೆ ತಲ್ಲತ್ ಮತ್ತು ನೌಫಾಲ್ ಪೊಲೀಸರ ಮೇಲೆ ಮದ್ಯದ ಬಾಟಲಿ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು ಎನ್ನಲಾಗಿದೆ. ಈ ವೇಳೆ ತಲ್ಲತ್ ಮತ್ತು ನೌಫಾಲ್ ಕಾಲಿಗೆ ಗುಂಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯಾಳು ಆರೋಪಿಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ಆರೋಪಿ ಸಾಹೀಲ್ ವಾಹನದಲ್ಲಿ ಕುಳಿತುಕೊಂಡಿದ್ದ ಕಾರಣ ಆತನಿಗೆ ಗುಂಡು ಹಾರಿಸದೆ ಅಂಕೋಲಾ ಪೊಲೀಸ್ ಠಾಣೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದರು.

- Advertisement -

ಪ್ರಕರಣದ ಹಿನ್ನೆಲೆ…
ಜ. 28ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಮನಗುಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಲ್ಲಿಸಿದ್ದ ಕ್ರೇಟಾ ಕಾರಿನ ಹಿಂಬದಿ ಸೀಟಿನ ಅಡಿಯಲ್ಲಿ 1.14 ಕೋಟಿ ರೂ. ನಗದು ಪತ್ತೆಯಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನ ನೋಂದಣಿ ಸಂಖ್ಯೆ ಬದಲಾಯಿಸಿರುವುದು ಬೆಳಕಿಗೆ ಬಂದಿತ್ತು. ಚಾಸಿಸ್ ನಂಬರ್ ಮೂಲಕ ಆ ಕಾರು ಮಂಗಳೂರಲ್ಲಿ ವಾಸವಾಗಿರುವ ಮಹಾರಾಷ್ಟ್ರ ಮೂಲದ ಬಂಗಾರದ ಆಭರಣ ತಯಾರಕ ವಿವೇಕ್ ಪವಾರ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಬಳಿಕ ವಿವೇಕ್ ಪವಾರ್ ಅವರು ಮಂಗಳೂರಿನ ನಿವಾಸಿಯಾಗಿರುವ ಚಿನ್ನದ ವ್ಯಾಪಾರಿ ರಾಜೇಂದ್ರ ಪವಾರ್, ಬಂಟ್ವಾಳ ತಾಲೂಕಿನ ಪುಣಚದ ಅಬ್ದುಲ್ ಸಮದ್ ಅಂದುನಿ ಮತ್ತು ಮಂಗಳುರಿನ ಜೆಪ್ಪು ನಿವಾಸಿ ಇಸಾಕ್ ಎಂಬವರ ಜತೆ ಅಂಕೋಲಾ ಪೊಲೀಸ್ ಠಾಣೆಗೆ ಹಾಜರಾಗಿ ದರೋಡೆ ಪ್ರಕರಣ ದಾಖಲಿಸಿದ್ದರು.


ರಾಜೇಂದ್ರ ಪವಾರ್‌ ಅವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಆಕಾಶ ಪವಾರ್‌ ಸೂಚನೆಯಂತೆ ರಾಜೇಂದ್ರ ಅವರ ಕಾರು ಚಾಲಕ ಮಹಮ್ಮದ್‌ ಇಸಾಕ್‌ ಅವರು ಇನ್ನೋರ್ವ ಚಾಲಕ ಅಬ್ದುಲ್‌ ಸಮದ್‌ ಜತೆ ಬೆಳಗಾವಿಯ ಸಚಿನ್‌ ಜಾಧವ್‌ ಎಂಬರಿಗೆ ಬಂಗಾರ ನೀಡಲು ಬೆಳಗಾವಿಗೆ ಹೋಗಿದ್ದರು. ಜ. 26ರಂದು ಬೆಳಗ್ಗೆ 3.45ಕ್ಕೆ ಕೆ.ಎ. 19 ಎಂ.ಪಿ. 1036 ನಂಬರಿನ ಕಾರಿನ ಸೀಟಿನ ಕೆಳಗೆ ಲಾಕರ್‌ ನಲ್ಲಿ ಬಂಗಾರ ಇಟ್ಟು ಕಾರಿನ ನಂಬರ್‌ ಪ್ಲೇಟ್‌ ಬದಲಾಯಿಸಿದ್ದರು. ಕೆ.ಎ. 51 ಎಂ.ಬಿ. 9634 ನಂಬರ್‌ ಪ್ಲೇಟ್‌ ಅಳವಡಿಸಿ ಬೆಳಗಾವಿಗೆ ತೆರಳಿ ತುಷಾರ್ ಎಂಬವರಿಗೆ ಬಂಗಾರ ನೀಡಿ ಅವರಿಂದ2.95 ಕೋಟಿ ರೂಪಾಯಿ ನಗದು ಪಡೆದಿದ್ದರು. ಅದರಲ್ಲಿ 1.80 ಕೋಟಿ ರೂ. ನಗದನ್ನು ಡ್ರೈವರ್‌ ಕೆಳಗಡೆ ಸೀಟಿನ ಅಡಿಯಲ್ಲಿ ಇಟ್ಟು, ಉಳಿದ 1.15 ಕೋಟಿ ರೂ. ನಗದನ್ನು ಹಿಂಬದಿ ಸೀಟಿನ ಅಡಿಯಲ್ಲಿರುವ ಲಾಕರ್‌ನಲ್ಲಿಟ್ಟು ಊರಿಗೆ ಹೊರಟಿದ್ದರು. ದಾರಿ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಾಟಿ ಅಂಕೋಲಾ ಕಡೆ ಬರುತ್ತಿದ್ದಾಗ ಸಂಜೆ 4 ಗಂಟೆ ಸಮಯಕ್ಕೆ ಬಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಓವರ್‌ ಟೇಕ್‌ ಮಾಡಿ ಬಂದ ಐದು ಮಂದಿ ಅಪರಿಚಿತರ ತಂಡ ಮಾರಕಾಸ್ತ್ರಗಳನ್ನು ಹಿಡಿದು ಕಾರನ್ನು ಅಡ್ಡಗಟ್ಟಿದ್ದರು. ಕಾರಿನ ಗಾಜುಗಳನ್ನು ಒಡೆದು ಚಾಲಕರ ಪರ್ಸ್ ಮತ್ತು ಮೊಬೈಲ್ ಕಸಿದು ಕಾರನ್ನು ಅಪಹರಿಸಿದ್ದರು. ಕಾರನ್ನು ರಾಮನಗುಳಿ ಬಳಿ ಬಿಟ್ಟು ಹೋಗಿದ್ದರು. ಕಾರು ಪತ್ತೆಯಾದಾಗ ಕಾರಿನ ಹಿಂಬದಿ ಸೀಟಿನಲ್ಲಿದ್ದ 1.14 ಕೋಟಿ ರೂಪಾಯಿ ಕಾರಿನಲ್ಲೇ ಇತ್ತು. ಚಾಲಕನ ಸೀಟಿನ ಕೆಳಗಿದ್ದ 1.80 ಕೋಟಿ ರೂಪಾಯಿ ನಾಪತ್ತೆಯಾಗಿತ್ತು.


ದರೋಡೆಯಿಂದ ನಾವು ಹೆದರಿದ್ದರಿಂದ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಬಳಿಕ ಪೊಲೀಸರು ದರೋಡೆಕೋರರ ಪತ್ತೆಗೆ ಪತ್ತೆಗೆ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

- Advertisement -


Must Read

Related Articles