Home ಟಾಪ್ ಸುದ್ದಿಗಳು ಅಂಗನವಾಡಿ ನೌಕರರ ಪ್ರತಿಭಟನೆ 4ನೇ ದಿನಕ್ಕೆ: ಧರಣಿ ಸ್ಥಳದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ನ್ಯಾ. ನಾಗಮೋಹನ್ ದಾಸ್...

ಅಂಗನವಾಡಿ ನೌಕರರ ಪ್ರತಿಭಟನೆ 4ನೇ ದಿನಕ್ಕೆ: ಧರಣಿ ಸ್ಥಳದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ನ್ಯಾ. ನಾಗಮೋಹನ್ ದಾಸ್ ಭಾಗಿ

ಬೆಂಗಳೂರು: ನಿಮ್ಮ ದೃಢ ನಿರ್ಧಾರಕ್ಕೆ ನನ್ನದೊಂದು ಸಲಾಂ, ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಕೂಡಲೇ ಸರಕಾರ ಬೇಡಿಕೆಗಳನ್ನು ಈಡೇರಿಸಬೇಕು. ಅಂಗನವಾಡಿ ನೌಕರರು ಗ್ಯಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದನ್ನು ಸರಕಾರ ಜಾರಿ ಮಾಡಬೇಕು. ಅದು ಸರಕಾರದ ಜಬಾಬ್ದಾರಿ, ವಿಳಂಬ ಮಾಡದೇ ಜಾರಿ ಮಾಡಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದ್ದಾರೆ.


ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ನ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಇಂದು( ಜನವರಿ 26) ನಾಲ್ಕನೇ ದಿನಕ್ಕೆ ಮುಂದುವರೆದಿದ್ದು, ಇಂದು ಗಣರಾಜ್ಯೋತ್ಸವ ಆಚರಣೆಯನ್ನು ಧರಣಿ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ನ್ಯಾ. ಎಚ್. ಎನ್. ನಾಗಮೋಹನದಾಸ್ ಭಾಗವಹಿಸಿ ಮಾತನಾಡಿದರು.
ತಾವುಗಳು ನಾಲ್ಕು ದಿನದಿಂದ ಶಾಂತಿಯುತವಾಗಿ, ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದೀರಿ, ಸರಕಾರ ಕಣ್ಣಬಿಟ್ಟು ನೋಡಬೇಕು. ಕಿವಿಗೊಟ್ಟು ಕೇಳಬೇಕು. ಹೃದಯ ತೆರೆದು ನೋಡಬೇಕು. ಇವರ ತಾಳ್ಮೆಯನ್ನು ಪ್ರಶ್ನಿಸುವ ಕೆಲಸ ಬೇಡ. ಇವರ ಹೋರಾಟ ತೀವ್ರಗೊಂಡು ಏನಾದರೂ ಅನಾಹುತವಾದರೆ ಸರಕಾರವೇ ಹೊಣೆಗಾರನಾಗಬೇಕಾಗುತ್ತದೆ ಎಂದು ನ್ಯಾ. ನಾಗಮೋಹನದಾಸ್ ಎಚ್ಚರಿಸಿದರು.


ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಮಾತನಾಡಿ, ಈ ಭಾರತದ ದೇಶದ ಜನರಾಗಿ ಪ್ರತಿಭಟನೆಯ ನಡುವೆಯೂ ಗಣರಾಜ್ಯೋತ್ಸವವನ್ನು ಆಚರಿಸುವ ಮೂಲಕ ಅಂಗನವಾಡಿ ನೌಕರರು ಕರ್ತವ್ಯವನ್ನು ಮೆರದಿದ್ದಾರೆ ಎಂದು ಹೇಳಿದರು.


ಹೆಣ್ಣು ಎನ್ನುವ ಕಾರಣಕ್ಕಾಗಿ ಕೀಳಾಗಿ ನೋಡಲಾಗುತ್ತಿದೆ. ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕಲ್ಯಾಣ ರಾಜ್ಯದ ಕಲ್ಪನೆ ನಾಶವಾಗುತ್ತಿದೆ. ಶಾಲೆಗೆ ಮಗು ಹೋಗಲು, ಸತ್ಪ್ರಜೆಯನ್ನಾಗಿಸಲು ಅಂಗನವಾಡಿ ನೌಕರರು ಹಾಕುತ್ತಿರುವ ಶ್ರಮ ದೊಡ್ಡದಿದೆ. ಅವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಜಾವಾಬ್ದಾರಿ ಸರಕಾರದ್ದು ಎಂದು ತಿಳಿಸಿದರು.
ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್ ಹೇಳಿಕೆಯನ್ನು ಖಂಡಿಸಿದರು. ಸಚಿವ ಹಾಲಪ್ಪ ಆಚಾರ್ ಅವರ ಹೇಳಿಕೆ ಉಡಾಫೆಯಿಂದ ಕೂಡಿದೆ. ಇದನ್ನು ನಾವು ಖಂಡಿಸುತ್ತೇವೆ. ಸಚಿವರು ನಾಟಕವಾಡುವುದನ್ನು ಬಿಡಬೇಕು. ಆದೇಶ ತೆಗೆದುಕೊಂಡು ಬರುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ(2020)-ಎನ್ಇಪಿ ಜಾರಿಯಾದಲ್ಲಿ ಅಂಗನವಾಡಿ ಕೇಂದ್ರಗಳು ಮುಳಗಿ ಹೋಗಲಿವೆ. ಇದು ದೊಡ್ಡ ಅಪಾಯವಾಗಿದೆ. ಹೋರಾಟವನ್ನು ಹಗುರವಾಗಿ ಪರಿಗಣಿಸುವುದು ಸರಿಯಲ್ಲ. ಇದರ ಪರಿಣಾಮವನ್ನು ಸರಕಾರ ಅನುಭವಿಸಲಿದೆ ಎಂದು ಹೇಳಿದರು.
ಧರಣಿ ಸ್ಥಳಕ್ಕೆ ಇಲಾಖೆಯ ನಿರ್ದೇಶಕರು ಬಂದು ಹೋಗಿದ್ದಾರೆ, ಸಭೆ ನಡೆಸಿದ್ದಾರೆ. ಸಚಿವ ಸಂಪುಟಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ. ಆ ಪ್ರತಿಯನ್ನು ನಮಗೆ ತಂದು ನೀಡಬೇಕು. ಸಚಿವರು ಆ ಕುರಿತು ಸ್ಪಷ್ಟವಾದ ಆದೇಶದ ಪ್ರತಿಯನ್ನು ತರುವವರೆಗೂ ಈ ಹೋರಾಟ ಮುಂದುವರೆಯಲಿದೆ ಎಂದು ಎಸ್ ವರಲಕ್ಷ್ಮಿ ಅವರು ಎಂದರು.


ಕಾರ್ಮಿಕ್ರಮ ನಿಮಿತ್ತ ಚಿಂತನ್ ವಿಕಾಸ್ ಜನಪರ ಗೀತೆ ಹಾಡಿದರು. ಅಂಗನವಾಡಿ ನೌಕರರು ಡೊಳ್ಳು ಬಾರಿಸಿ ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ರಾಜ್ಯ ಮುಖಂಡರಾದ ಯಮುನಾ ಗಾಂವ್ಕರ್, ಜಿ.ಕಮಲಾ, ಶಾಂತಾ ಎನ್ ಘಂಟೆ, ಸಮುದಾಯ ಕರ್ನಾಟಕದ ಟಿ. ಸುರೇಂದ್ರ ರಾವ್ ಇದ್ದರು.

Join Whatsapp
Exit mobile version