Home ಟಾಪ್ ಸುದ್ದಿಗಳು ಬಿಜೆಪಿಯ ಸಿದ್ಧಾಂತ ಅನುಷ್ಠಾನದ ಯತ್ನ; ದೇಶದಲ್ಲಿ ಅಂತರ್ ಕಲಹಕ್ಕೆ ಕಾರಣ: ಬಿ.ಕೆ. ಹರಿಪ್ರಸಾದ್‌

ಬಿಜೆಪಿಯ ಸಿದ್ಧಾಂತ ಅನುಷ್ಠಾನದ ಯತ್ನ; ದೇಶದಲ್ಲಿ ಅಂತರ್ ಕಲಹಕ್ಕೆ ಕಾರಣ: ಬಿ.ಕೆ. ಹರಿಪ್ರಸಾದ್‌

ಚಿಕ್ಕಮಗಳೂರು: ‘ಬಿಜೆಪಿ ತನ್ನ ಸಿದ್ಧಾಂತವನ್ನು ಅನುಷ್ಠಾನಗೊಳಿಸುವ ಪ್ರಯತ್ನ ನಡೆಸುತ್ತಿದ್ದು, ಇದು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಷಡ್ಯಂತ್ರವಾಗಿದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿಗರು ಧರ್ಮದ ಹೆಸರಿನಲ್ಲಿ ಹಿಂಸೆ ಸೃಷ್ಟಿಸುತ್ತಿದ್ದಾರೆ. ಉದಯಪುರ, ಅಮರಾವತಿಯಲ್ಲಿ ನಡೆದ ಪ್ರಕರಣಗಳು ಅದನ್ನು ಪುಷ್ಟೀಕರಿಸುತ್ತದೆ. ಭಾವನಾತ್ಮಕ ವಿಚಾರ ಮುಂದಿಟ್ಟು ಜನರನ್ನು ತಟಸ್ಥಗೊಳಿಸುವ ಪ್ರಯತ್ನ ನಡೆಯುತ್ತಿದೆ. ಶೇ 20 ರಷ್ಟು ಇರುವ ಅಲ್ಪಸಂಖ್ಯಾತರಿಂದ ಶೇ 80ರಷ್ಟು ಇರುವ ಬಹುಸಂಖ್ಯಾತರಿಗೆ ಏನೋ ಆಗುತ್ತದೆ ಎಂಬ ‘ಬೆದರು ಗೊಂಬೆ’ ಸೃಷ್ಟಿಸುತ್ತಿದ್ದಾರೆ. ಹೀಗೇ ಮುಂದುವರಿದರೆ ರಾಷ್ಟ್ರದಲ್ಲಿ ಅಂತರ್ಯುದ್ಧ ನಡೆಯುವುದರಲ್ಲಿ ಸಂಶಯವಿಲ್ಲ’ ಎಂದು ಹೇಳಿದರು.

 ‘ಅಗ್ನಿಪಥ್‌ ಯೋಜನೆಯಿಂದ ಯುವಕರಿಗೆ ಭವಿಷ್ಯ ಇಲ್ಲ. ಈ ಯೋಜನೆಯಲ್ಲಿ ನೇಮಕವಾದವರು ನಾಲ್ಕು ವರ್ಷಗಳ ಬಳಿಕ ನಿವೃತ್ತಿಯಾಗುತ್ತಾರೆ. ಅವರಿಗೆ ಪಿಂಚಣಿ ಸೌಲಭ್ಯವೂ ಇಲ್ಲ. ಪ್ರಧಾನಿ ಮೋದಿ  ಎಂಟು ವರ್ಷದಲ್ಲಿ 16 ಕೋಟಿ ಉದ್ಯೋಗಾವಕಾಶ ಸೃಷ್ಟಿ ಮಾಡಬೇಕಾಗಿತ್ತು. ಆದರೆ ಅವರಿಗೆ  40 ಲಕ್ಷ ಉದ್ಯೋಗವನ್ನು ನೀಡಲೂ ಸಾಧ್ಯವಾಗಿಲ್ಲ. ದೇಶದಲ್ಲಿ  ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹಲವು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಿದರು.

 ರಾಜ್ಯ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಇದ್ದ ಎಲ್ಲಾ ನಿರೀಕ್ಷೆಗಳು  ಹುಸಿಯಾಗಿವೆ’ ಎಂದರು.

Join Whatsapp
Exit mobile version