Home ಟಾಪ್ ಸುದ್ದಿಗಳು ಎಸಿಬಿ ಅಕ್ರಮ ಪ್ರಶ್ನಿಸಿದ್ದಕ್ಕೆ ವರ್ಗಾವಣೆ ಬೆದರಿಕೆ: ಹೈಕೋರ್ಟ್ ನ್ಯಾ. ಸಂದೇಶ್ ಗಂಭೀರ ಆರೋಪ

ಎಸಿಬಿ ಅಕ್ರಮ ಪ್ರಶ್ನಿಸಿದ್ದಕ್ಕೆ ವರ್ಗಾವಣೆ ಬೆದರಿಕೆ: ಹೈಕೋರ್ಟ್ ನ್ಯಾ. ಸಂದೇಶ್ ಗಂಭೀರ ಆರೋಪ

►ಸಂವಿಧಾನಕ್ಕೆ ಮಾತ್ರ ನಾನು ಬದ್ಧನಾಗಿದ್ದೇನೆ

ಬೆಂಗಳೂರು: ಭ್ರಷ್ಟಾಚಾರಿಗಳಿಗೆ ಬುದ್ಧಿಕಲಿಸಬೇಕಿದ್ದ ಭ್ರಷ್ಟಾಚಾರ ನಿಗ್ರಹ ದಳವೇ (ಎಸಿಬಿ) ಭ್ರಷ್ಟರ ಕೂಪವಾಗಿದೆ. ಎಸಿಬಿ ಕಚೇರಿಗಳು  ಕಲೆಕ್ಷನ್ ಸೆಂಟರ್ ಗಳಾಗಿವೆ ಎಂದು ಇತ್ತೀಚಿಗೆ ಆಕ್ರೋಶ ವ್ಯಕ್ತಪಡಿಸಿದ್ದ  ಹಿನ್ನೆಲೆಯಲ್ಲಿ “ನಿನ್ನ ವರ್ಗಾವಣೆಯಾದೀತು ಹುಷಾರಾಗಿರು” ಎಂದು ನ್ಯಾಯಮೂರ್ತಿಯೊಬ್ಬರು ನನಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್. ಪಿ ಸಂದೇಶ್  ಅವರು ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ ಎಂದು ಸೋಮವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಪಿ ಎಸ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

“ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೇ ವರ್ಗಾವಣೆ ಬೆದರಿಕೆ ಹಾಕಲಾಗಿದೆ” ಎಂದು ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ನನ್ನ ತಂದೆ ನನಗಾಗಿ ಮಾಡಿರುವ ಭೂಮಿ ಇದೆ. ಅದನ್ನು ಉಳುಮೆ ಮಾಡಿಕೊಂಡು ಬದುಕಲೂ ಸಿದ್ಧನಿದ್ದೇನೆ. ನನಗೆ 500 ರೂಪಾಯಿಯಲ್ಲಿ ಜೀವನ ನಡೆಸುವುದೂ ಗೊತ್ತು, 5 ಸಾವಿರ ರೂಪಾಯಿಯಲ್ಲಿ ಬದುಕುವುದಕ್ಕೂ ಗೊತ್ತು. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ, ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಾಗಿಲ್ಲ. ಸಂವಿಧಾನಕ್ಕೆ ಮಾತ್ರ ನಾನು ಬದ್ಧನಾಗಿದ್ದೇನೆ ಎಂದು ನ್ಯಾಯಮೂರ್ತಿಗಳು ಕಟುವಾಗಿ ನುಡಿದರು.

ವಿಚಾರಣೆ ಆರಂಭವಾಗುತ್ತಿದ್ದಂತೆ ಎಸಿಬಿ ಪರ ವಕೀಲ ಪಿ ಎನ್ ಮನಮೋಹನ್ ಅವರು “ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಭಾಗೀಯ ಪೀಠದ ಮುಂದಿದ್ದು, ಈಗಾಗಲೇ ಆ ಪೀಠಕ್ಕೆ ವರದಿ ಸಲ್ಲಿಸಲಾಗಿದೆ” ಎಂದರು. ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸಿದ ಮಾತ್ರಕ್ಕೆ ಇಲ್ಲಿ ವರದಿ ನೀಡಬಾರದು ಎಂದರ್ಥವೇ? ಕಳೆದ ವಿಚಾರಣೆ ವೇಳೆ ವರದಿ ಸಲ್ಲಿಸುವುದಾಗಿ ನೀವೇ ಭರವಸೆ ನೀಡಿದ್ದಿರಿ. ಇದೀಗ ಬಂದು ಬೇರೆ ರೀತಿ ಹೇಳುತ್ತಿದ್ದೀರಿ. ನೀವು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ?” ಎಂದು ಎಸಿಬಿ ಪರ ವಕೀಲರನ್ನು ತೀಕ್ಷ್ಣವಾಗಿ ಪ್ರಶ್ನಿಸಿತು.

ಬೇಲಿಯೇ ಎದ್ದು ಹೊಲ ಮೇಯುತ್ತಿದೆ: ‘ರಾಜ್ಯದಲ್ಲಿ ಏನು ನಡೆಯುತ್ತಿದೆ. ಅಡ್ವೊಕೇಟ್ ಜನರಲ್ ಅವರೇ, ಜಿಲ್ಲಾಧಿಕಾರಿ ಕಚೇರಿಯಲ್ಲಿ ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಿಸಿಕೊಳ್ಳಲಾಗುತ್ತದೆ, ಖಾಸಗಿ ಪಿಎ ಡಿಸಿ ಹತ್ರ ಎಲ್ಲ ಮಾಡಿಸಿಕೊಡುತ್ತೇನೆ ಎಂದರೆ ಅದರರ್ಥ ಏನು, ಇವೆಲ್ಲಾ ಸಂಭಾಷಣೆ ಫೋನ್ ನಲ್ಲಿ ರೆಕಾರ್ಡ್ ಆಗಿವೆ. ಡಿಸಿ ಒಪ್ಪಿಗೆ ಇಲ್ಲದೆಯೇ ಆತ  5 ಲಕ್ಷ ಲಂಚ ಪಡೆಯಲು ಸಾಧ್ಯವೇ. ಬೇಲಿಯೇ ಎದ್ದು ಹೊಲ ಮೇಯುತ್ತಿದೆಯಲ್ಲವೇ’ ಎಂದು ಸಂದೇಶ್ ಪ್ರಶ್ನಿಸಿದರು.

ಎಸಿಬಿ ಸಲ್ಲಿಸಿರುವ ಬಿ ವರದಿಗಳ ಮಾಹಿತಿ ನೀಡಿಲ್ಲವೇಕೆ, ಮಾಹಿತಿ ನೀಡಲು ಏಕೆ ಹಿಂಜರಿಯುತ್ತಿದ್ದೀರಿ. ಎಸಿಬಿ ಎಡಿಜಿಪಿಯ ಸರ್ವೀಸ್ ರೆಕಾರ್ಡ್ ಏಕೆ ಹಾಜರುಪಡಿಸಿಲ್ಲ. ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ವ್ಯಕ್ತಿ ಗುತ್ತಿಗೆ ನೌಕರನಾಗಿದ್ದಾನೆ. ಆತನನ್ನು ಯಾರು ನೇಮಕ ಮಾಡಿದ್ದು ಎಂಬ ಬಗ್ಗೆ ವಿವರ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ ಪೀಠವು ಎಸಿಬಿ ಎಡಿಜಿಪಿ ಸರ್ವೀಸ್ ರೆಕಾರ್ಡ್ ಹಾಜರುಪಡಿಸಲು ಡಿಪಿಎಎಆರ್ ಕಾರ್ಯದರ್ಶಿ ಮಧ್ಯಾಹ್ನ 2.30ಕ್ಕೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತು.

ಮಧ್ಯಾಹ್ನ ವಿಚಾರಣೆಗೆ ಹಾಜರಾದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಎಸಿಬಿ ಎಡಿಜಿಪಿಯ ವಿವರ ನೀಡಿ, ಸಂಜೆಯೊಳಗೆ ಸರ್ವೀಸ್ ರೆಕಾರ್ಡ್ ನೀಡುವುದಾಗಿ ತಿಳಿಸಿದರು. ಡಿಸಿ ಕಚೇರಿಯ ಗುತ್ತಿಗೆ ನೌಕರನ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಏನಿದೆ? ಇಲ್ಲಿ ಏನು ನಡೆಯುತ್ತಿದೆ ಅಡ್ವೊಕೇಟ್ ಜನರಲ್ ಅವರೇ. ದುಡ್ಡು ವಸೂಲಿ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಫೋನ್ನಲ್ಲಿ ನಡೆಸಿರುವ ಸಂಭಾಷಣೆ ಕೂಡಾ ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿ ಒಪ್ಪಿಗೆ ಇಲ್ಲದೆ ಆತ 5 ಲಕ್ಷ ರೂಪಾಯಿ ಲಂಚ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿತು.

ಅದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್ ಅವರು ಎಸಿಬಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಒದಗಿಸುತ್ತೇವೆ. ಬಿ ವರದಿಗಳ ಕುರಿತ ಸಂಪೂರ್ಣ ಮಾಹಿತಿ ನೀಡುತ್ತೇವೆ. ನ್ಯಾಯಾಲಯದ ಆದೇಶವನ್ನು ಸರ್ಕಾರ ಚಾಚೂ ತಪ್ಪದೆ ಪಾಲಿಸಲಿದೆ. ನನ್ನ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಬಹುದು ಎಂದು ಪೀಠಕ್ಕೆ ಭರವಸೆ ನೀಡಿದರು. ಅದನ್ನು ದಾಖಲಿಸಿಕೊಂಡ ಪೀಠವು ಎಸಿಬಿ ಸ್ಥಾಪನೆಗೊಂಡ ದಿನದಿಂದ ಈವರೆಗೆ ಸಲ್ಲಿಸಿರುವ ಬಿ ರಿಪೋರ್ಟ್ಗಳೆಷ್ಟು, ಎಷ್ಟು ವರದಿಗಳು ಅಂಗೀಕೃತಗೊಂಡಿವೆ ಎಂಬ ಮಾಹಿತಿಯನ್ನು ಜುಲೈ 7ರೊಳಗೆ ಸಲ್ಲಿಸಬೇಕು ಎಂದು ಎಸಿಬಿಗೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.

Join Whatsapp
Exit mobile version