ಮಡಿಕೇರಿ: ಸಂಸದ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆ ನೀಡಿರುವ SDPI ಮತ್ತು PFI ಸಂಘಟನೆಯ ಮಾನ್ಯತೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿರುವ ಕೊಡಗು ಬಿಜೆಪಿಗೆ ತಿರುಗೇಟು ನೀಡಿರುವ ಜಿಲ್ಲಾ SDPI ಮುಖಂಡ ಅಮೀನ್ ಮುಹ್ಸಿನ್, ಭಯೋತ್ಪಾದನೆಯ ಕಾರಣದಿಂದ ಮೂರು ಬಾರಿ ನಿಷೇಧಕ್ಕೊಳಪಟ್ಟು ಇದುವರೆಗೂ ಈ ನೆಲದ ಕಾನೂನು ಪ್ರಕಾರ ನೋಂದಾಯಿಸದ RSSನ ರಾಜಕೀಯ ಅಂಗವಾಗಿರುವ ಬಿಜೆಪಿ ಸಂವಿಧಾನ ಬದ್ಧವಾಗಿ ಕಾರ್ಯಾಚರಿಸುವ ಎಸ್ ಡಿಪಿಐ/ಪಿಎಫ್ಐ ಯ ಮಾನ್ಯತೆ ರದ್ದು ಪಡಿಸಬೇಕೆಂದು ಹೇಳುವುದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಗುರುವಾರ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪೇಜಾವರ ಶ್ರೀ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖರ ವಿವಾದಾತ್ಮಕ ಹೇಳಿಕೆಗೆ ಪ್ರತಾಪ್ ಸಿಂಹ ಪ್ರತಿಕ್ರಿಸಿದ್ದಾರೆ. ಅದನ್ನು ಹೊರತುಪಡಿಸಿ ಯಾವುದೇ ಉದ್ದೇಶಪೂರ್ವಕವಾಗಿ ಕೋಮು ಗಲಭೆ ಸೃಷ್ಟಿಸುವಂತ ಹೇಳಿಕೆ ನೀಡಿಲ್ಲ. SDPI ಮತ್ತು PFI ಪ್ರಚೋದನಾಕಾರಿ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಆರೋಪಿಸಿದರು.
SDPI ಹಾಗೂ PFI ಸಂಘಟನೆಯ ಮಾನ್ಯತೆಯನ್ನು ರದ್ದು ಪಡಿಸಬೇಕು. ಈ ಕುರಿತು ಸರ್ಕಾರಕ್ಕೂ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅಮೀನ್ ಮುಹ್ಸಿನ್, ಭಯೋತ್ಪಾದನೆಯ ಕಾರಣದಿಂದ ಮೂರು ಬಾರಿ RSS ಅನ್ನು ನಿಷೇಧಿಸಲಾಗಿದೆ. ಇಂತಹ ಸಂಘಟನೆಯವರಿಂದ ನಮಗೆ ಪಾಠ ಮಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.