ಮಂಗಳೂರು: ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ಬದ್ಧವಾಗಿರುವುದಾಗಿ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.
ಅವರು ಅ.14 ರಂದು ನಗರದ ಉರ್ವಾಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿ ಆವರಣದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲಾದ ಬಯಲು ರಂಗಮಂದಿರ ಉದ್ಟಾಟಿಸಿ, ನಂತರ ಸಿರಿಚಾವಡಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ತುಳು ಭಾಷೆ ತನ್ನ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಸದಾ ಶ್ರೀಮಂತವಾಗಿದೆ. ಇದೀಗ ಕಲೆ ಹಾಗೂ ಸಾಹಿತ್ಯದಲ್ಲೂ ಇನ್ನಷ್ಟು ಎತ್ತರಕ್ಕೇರುತ್ತಿದೆ, ತುಳುವಿನಲ್ಲಿ ಹೆಚ್ಚಿನ ಕಾದಂಬರಿಗಳು, ಸಾಹಿತ್ಯ ಪ್ರಕಾರಗಳು ಬಹುಮುಖ್ಯವಾಗಿ ಕಣಜ ಎನ್ನುವ ತುಳು ಭಾಷೆ ಅಧಿಕೃತ ವೆಬ್ ಸೈಟ್ ಸಿದ್ಧಗೊಂಡಿರುವುದು ಸಂತಸದ ವಿಚಾರ, ತುಳು ಭಾಷೆ ಹಾಗೂ ತುಳು ಭವನದ ಅಭಿವೃದ್ಧಿಗೆ ತಾವು ಸದಾ ಸಿದ್ಧ ಎಂದರು.
ತುಳು ಭಾಷೆ ಕಲಾವಿದರಿಗೆ, ಸಾಹಿತಿಗಳಿಗೆ, ಬರಹಗಾರರಿಗೆ ನಿರಂತರ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಬಯಲು ರಂಗಮಂದಿರವನ್ನು ತುಳು ಭಾಷೆ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದ ಅವರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲೂ ಅಕಾಡೆಮಿಗೆ ಅನುದಾನ ನೀಡುವ ಬಗ್ಗೆ ಚಿಂತಿಸಬೇಕು, ತುಳು ಭವನದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಭಾಷೆ ಪ್ರೇಮಿಗಳಿಗೂ ಇದೇ ಸಂದರ್ಭದಲ್ಲಿ ಅವರು ಧನ್ಯವಾದಗಳನ್ನು ಸಲ್ಲಿಸಿದರು.
ತುಳು ಭಾಷೆಯ ಮೇಲೆ ಗೌರವವಿಟ್ಟು ಸರ್ಕಾರ ಅನುದಾನ ನೀಡಿದೆ, ಆದ ಕಾರಣ ಈ ಬೃಹತ್ ಭವನ ನಿರ್ಮಾಣಗೊಂಡಿದೆ. ಭವನದ ಉಳಿದ ಭಾಗ ಮತ್ತು ಇತರೆ ಅಭಿವೃದ್ದಿಗೆ ಬೇಕಾದ ಅನುದಾನಕ್ಕಾಗಿ ಸೂಕ್ತ ರೂಪುರೇಷೆಗಳೊಂದಿಗೆ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲಾಗುವುದು. ಇದರೊಂದಿಗೆ ತುಳು ಭಾಷೆಗೆ ಅಧಿಕೃತ ಮಾನ್ಯತೆ ತಂದುಕೊಡಲು ನಿರಂತರವಾಗಿ ಶ್ರಮಿಸಲಾಗುವುದು ಎಂದವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮತ್ತು ಎಂಸಿಎಫ್ ಪ್ರಾಯೋಜಕತ್ವದ ದಾಖಲೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಿದ ವಿವಿಧ ಮಾಧ್ಯಮಗಳ ಮುಖ್ಯಸ್ಥರನ್ನು ಹಾಗೂ ತುಳು ಸಾಹಿತಿಗಳನ್ನು ಸನ್ಮಾನಿಸಲಾಯಿತು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್ ಗಣೇಶ್ ಕುಲಾಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ'ಸೋಜ, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕವಿತಾ ಸೇರಿದಂತೆ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರು, ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.