ಅಕ್ರಮ ಮರಳುಗಾರಿಕೆಯಿಂದ ಮೂರು ಸೇತುವೆಗಳಿಗೆ ಹಾನಿಯಾಗಿದ್ದರೂ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ
ಮಂಗಳೂರು : ಫಲ್ಗುಣಿ (ಗುರುಪುರ) ನದಿಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರು ಸೂಚನೆ ಕೊಟ್ಟ ಬಳಿಕವೂ ಬಂಟ್ವಾಳ ತಾಲೂಕಿನ ಮುಲ್ಲರಪಟ್ಣದಿಂದ ಹಿಡಿದು ಮಂಗಳೂರು ತಾಲೂಕಿನ ಮರವೂರು ತನಕ ಫಲ್ಗುಣಿ ನದಿಯಲ್ಲಿ ಸುಮಾರು 15 ಕಿಲೋ ಮೀಟರ್ ಉದ್ದಕ್ಕೆ ರಾತ್ರಿ ಸಮಯದಲ್ಲಿ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಕೇಳಿಬಂದಿವೆ.
ಪ್ರಮುಖವಾಗಿ ಅಡ್ಡೂರು ಗ್ರಾಮದಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಆರೋಪ ಇದೆ.
ಶಿಥಿಲಗೊಂಡಿರುವ ಅಡ್ಡೂರು ಸೇತುವೆ ಬಳಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗಣಿ ಸಚಿವರು, ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ದೂರು ಸಲ್ಲಿಕೆಯಾಗಿತ್ತು.
ಅಕ್ರಮ ಮರಳುಗಾರಿಕೆಯಿಂದ ಅಡ್ಡೂರು ಸೇತುವೆ ಹಾನಿಯಾಗಿದೆ ಮತ್ತು ಸ್ಥಳೀಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಎಂಬವರು ಆಗಸ್ಟ್ 31ರಂದು ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಅಕ್ರಮ ಮರುಳುಗಾರಿಕೆಗೆ ಶಾಶ್ವತ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು.
ಅಡ್ಡೂರು ಬಳಿಯ ಅಳಕೆ, ಮಡಿ, ಹೊಳೆಬದಿ ಮತ್ತು ಕೆಳಗಿನ ಕೆರೆಯಲ್ಲಿ ನೂರಾರು ಲೋಡ್ ಮರಳು ಸಾಗಿಸಲಾಗುತ್ತಿದೆ, ಸ್ಥಳೀಯ ದಂಧೆಕೋರರು ಉತ್ತರ ಪ್ರದೇಶ ಕಾರ್ಮಿಕರನ್ನು ಬಳಸಿಕೊಂಡು 100ಕ್ಕೂ ಅಧಿಕ ದೋಣಿಗಳನ್ನು ಬಳಸಿ ಮರಳು ದಂಧೆ ನಡೆಸುತ್ತಿದ್ದಾರೆ, ಅಡ್ಡೂರು ಸೇತುವೆಯ ಅಡಿಪಾಯ ಕುಸಿಯಲು ಅಕ್ರಮ ಮರಳುಗಾರಿಕೆಯೇ ಮೂಲಕ ಕಾರಣ, ಅಲ್ಲದೇ ಮರಳು ಸಾಗಾಟದ ಲಾರಿಗಳ ಹಾವಳಿಯಿಂದ ಸ್ಥಳೀಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದ್ದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರೂ ಸರಿಯಾಗಿ ಸ್ಪಂದಿಸುತ್ತಿಲ್ಲ, ಅಧಿಕಾರಿಗಳು ಕೂಡ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಈ ದೂರಿಗೆ ಸ್ಪಂದಿಸಿರುವ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರು ದಿನಾಂಕ 3/09/2024ರಂದು ದಕ್ಷಿಣ ಕನ್ನಡ ಜಿಲ್ಲೆಯ ಟಾಸ್ಕ್ ಫೋರ್ಸ್ ಸಮಿತಿ ಮತ್ತು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅದ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅಕ್ರಮ ಮರುಳುಗಾರಿಕೆ ಕ್ರಮತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದರ ಪ್ರತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ರವಾನಿಸಲಾಗಿತ್ತು.
ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರ ಸೂಚನೆ ಬಳಿಕವೂ ಅಡ್ಡೂರು ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಮುಂದುವರಿಯುತ್ತಿದೆ ಎಂದು ದೂರದಾರ ಅಬ್ದುಲ್ ಖಾದರ್ ಆರೋಪಿಸಿದ್ದಾರೆ. ಈ ಹಿಂದೆ ಹಗಲಿನಲ್ಲೇ ದಂಧೆ ನಡೆಸ್ತಿದ್ದವರು ಸದ್ಯ ರಾತ್ರಿ ಸಮಯದಲ್ಲಿ ಮಾತ್ರ ದಂಧೆ ಮುಂದುವರಿಸಿದ್ದಾರೆ. ಈಗಲೂ ಹತ್ತಾರು ಲೋಡ್ ಮರಳು ರಾತ್ರಿ ಹೊತ್ತಲ್ಲಿ ಸಾಗಟವಾಗುತ್ತಿದೆ, ಆದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಎಂದು ಪ್ರಸ್ತುತ ನ್ಯೂಸ್ ಬಳಿ ದೂರಿದ್ದಾರೆ.
ಈ ಬಗ್ಗೆ ಪ್ರಸ್ತುತ ನ್ಯೂಸ್, ಜಿಲ್ಲಾ ಗಣಿ ಅಧಿಕಾರಿ ಕೃಷ್ಣವೇಣಿ ಅವರನ್ನು ಸಂಪರ್ಕಿಸಿದಾಗ ಅವರು ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದರು. ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರ ಸೂಚನೆ ಬಳಿಕ ಎರಡು ಮರಳು ಗುತ್ತಿಗೆಯನ್ನು ತಾತ್ಕಲಿಕವಾಗಿ ತಡೆ ಹಿಡಿದಿದ್ದೇವೆ, ನಮ್ಮ ಅಧಿಕಾರಿಗಳು ಅಡ್ಡೂರು ವ್ಯಾಪ್ತಿಯಲ್ಲಿ ದಾಳಿ ಮಾಡಿ ಎರಡು ದೋಣಿಗಳನ್ನು ಮುಟ್ಟುಗೋಲು ಹಾಕಿದ್ದಾರೆ, ಅಧಿಕಾರಿಗಳು ರಾತ್ರಿ ಸಮಯದಲ್ಲಿ ಶೋಧ ಮಾಡುತ್ತಿದ್ದಾರೆ, ಅಕ್ರಮಗಳನ್ನು ಕಂಡುಬಂದರೆ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಅಕ್ರಮ ಮರುಗಾರಿಕೆಯಿಂದ ಮೂರು ಸೇತುವೆಗಳಿಗೆ ಹಾನಿ
ಫಲ್ಗುಣಿ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಈಗಾಗಲೇ ಮೂರು ಸೇತುವೆಗಳಿಗೆ ಹಾನಿಯಾಗಿವೆ. ಮೊದಲಿಗೆ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಮುಲ್ಲರಪಟ್ಣ ಸೇತುವೆ ಬಿರುಕುಬಿಟ್ಟು ಸಂಚಾರಕ್ಕೆ ಅಡಚಣೆಯಾಗಿತ್ತು. ಆ ಬಳಿಕ ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಕೂಡ ಬಿರುಕುಬಿಟ್ಟಿತ್ತು. ಅಲ್ಲಿ ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ. ಅಷ್ಟರಲ್ಲಿ ಅಡ್ಡೂರು ಸೇತುವೆ ಕೂಡ ಶಿಥಿಲಗೊಂಡಿದೆ. ಸದ್ಯ ಅಡ್ಡೂರು ಸೇತುವೆಯಲ್ಲಿ ಘನ ವಾಹನಗಳಿಗೆ ನಿಷೇಧ ಹೇರಲಾಗಿದೆ. ಅಡ್ಡೂರು ಸೇತುವೆಗೆ ಹಾನಿಯಾಗಲು ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಅಕ್ರಮ ಮರುಗಾರಿಕಯೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.