ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ‘ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ’ಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಹಿಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೈವಾಡವಿದೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾ ಪ್ರಕರಣವನ್ನು ಕೇಂದ್ರದ ತನಿಖಾ ಸಂಸ್ಥೆಯಿಂದ ನಡೆಸುವಂತೆ ಕುಮಾರಸ್ವಾಮಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಅದನ್ನು ಆಧರಿಸಿ ಇ.ಡಿ.ಯವರು ‘ಜಾರಿ ನಿರ್ದೇಶನಾಲಯದ ಪ್ರಕರಣದ ಮಾಹಿತಿ ವರದಿ’ (ಇಸಿಐಆರ್) ದಾಖಲಿಸಿದ್ದಾರೆ. ಕುಮಾರಸ್ವಾಮಿ ಬರೆದಿದ್ದ ಪತ್ರದ ಮಾದರಿಯಲ್ಲೇ ದೂರುದಾರ ಸ್ನೇಹಮಯಿ ಕೃಷ್ಣ ಕೂಡ ಇ.ಡಿ.ಗೆ ದೂರು ಸಲ್ಲಿಸಿದ್ದಾರೆ’ ಎಂದು ಆರೋಪಿಸಿದರು.
‘ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬುದು ಬಿಜೆಪಿ– ಜೆಡಿಎಸ್ನವರ ಹುನ್ನಾರವಾಗಿದೆ. ಆ ಪಕ್ಷಗಳ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಬಿ.ವೈ.ವಿಜಯೇಂದ್ರ, ಆರ್. ಅಶೋಕ ಮೊದಲಾದವರೇ ನಿರ್ದೇಶಕರು ಹಾಗೂ ನಿರ್ಮಾಪಕರು. ಸ್ನೇಹಮಯಿ ಕೃಷ್ಣ ಪಾತ್ರಧಾರಿಯಷ್ಟೆ’ ಎಂದು ಹೇಳಿದರು.