ತೃಣಮೂಲ ಕಾಂಗ್ರೆಸ್‌ನ ಎಲ್ಲ ಹುದ್ದೆಗಳ ವಿಸರ್ಜನೆ: ಮಮತಾ ಮಹತ್ವದ ನಡೆ

Prasthutha|

ಕಲ್ಕತ್ತ: ಪಕ್ಷದ ಮಹತ್ವದ ಬೆಳವಣಿಗೆಯ ಉದ್ದೇಶದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್‌ನ ಎಲ್ಲ ಹುದ್ದೆಗಳನ್ನು ವಿಸರ್ಜನೆ ಮಾಡಿದ್ದಾರೆ.ಒಬ್ಬರಿಗೆ ಒಂದೇ ಹುದ್ದೆ ಎಂಬ ವಿಚಾರದ ಬಗ್ಗೆ ಮಮತಾ ಅವರ ಸೋದರಳಿಯ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನಡುವೆ ಮುಸುಕಿನ ಗುದ್ದಾಟ ನಡೆದಿರುವ ಬೆನ್ನಲ್ಲೇ ಪದಾಧಿಕಾರಿಗಳ ವಿಸರ್ಜನೆ ಆದೇಶ ಹೊರಬಿದ್ದಿದೆ.
ಮುಖ್ಯಮಂತ್ರಿ ಮಮತಾ ಶೀಘ್ರದಲ್ಲೇ ಹೊಸ ಪದಾಧಿಕಾರಿಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಹಿರಿಯ ನಾಯಕರ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ಹಿನ್ನೆಲೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಲಿದ್ದಾರೆ ಎಂಬ ಊಹಾಪೋಹಗಳ ನಡುವೆ ಈ ವಿದ್ಯಮಾನ ನಡೆದಿದೆ.
ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳಲು ಮಮತಾ ಅವರು ಪಕ್ಷದ ಅಧ್ಯಕ್ಷೆಯಾಗಿ ಮರು ಆಯ್ಕೆಗೊಂಡ ಬಳಿಕ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿ ನಿನ್ನೆ ಸಭೆ ಸೇರಿ ಪಕ್ಷದ ರಾಷ್ಟ್ರೀಯ ಕಾರ್ಯಕಕಾರಿ ಸಮಿತಿಯನ್ನು ಘೋಷಿಸಿದೆ ಎಂದು ಪಕ್ಷದ ನಾಯಕ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸ್ಥಾನ ಪಡೆದವರ ಪೈಕಿ ಹೆಚ್ಚಿನವರು ಮಮತಾ ಬಣದವರಾಗಿದ್ದಾರೆ.
ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಲಿದ್ದು, ಪ್ರಕಟವಾಗುವವರೆಗೆ ಹಿಂದೆಯಿದ್ದ ಹುದ್ದೆಗಳು ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version