ಉಕ್ರೇನ್ ಮೇಲಿನ ಆಕ್ರಮಣವನ್ನು ವಿರೋಧಿಸಿದ್ದ ನಗರಸಭೆಯ ವಿರೋಧ ಪಕ್ಷದ ಸದಸ್ಯನಿಗೆ ಮಾಸ್ಕೋದ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ʻ ಸುಳ್ಳು ಮಾಹಿತಿʼಯನ್ನು ಹರಡಿದ ಆರೋಪವನ್ನು ಮಾಸ್ಕೋ ನಗರಸಭಾ ಸದಸ್ಯ 60 ವರ್ಷದ ಅಲೆಕ್ಸಿ ಗೊರಿನೊವ್ ಮೇಲೆ ಹೊರಿಸಲಾಗಿತ್ತು.
ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಟೀಕಿಸಿದ್ದಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾದ ವಿರೋಧ ಪಕ್ಷದ ಮೊದಲ ಚುನಾಯಿತ ಸದಸ್ಯ ಗೋರಿನೋವ್ ಆಗಿದ್ದಾರೆ.
ʻನಿಮಗೆ ಇನ್ನೂ ಈ ಯುದ್ಧ ಬೇಕೇ?ʼ ಎಂಬ ಪೋಸ್ಟರ್ ಹಿಡಿದು ನ್ಯಾಯಾಲಯಕ್ಕೆ ಆಗಮಿಸುವ ಮೂಲಕ ಅಲೆಕ್ಸಿ ಗೊರಿನೊವ್, ಯುದ್ಧ ವಿರೋಧಿ ನಿಲುವನ್ನು ಮತ್ತಷ್ಟು ಸಮರ್ಥಿಸಿಕೊಂಡರು. ಆದರೆ ಪೋಸ್ಟರ್ ನ್ಯಾಯಾಧೀಶರಿಗೆ ಕಾಣದ ರೀತಿಯಲ್ಲಿ ಪೊಲೀಸರು ಅಡ್ಡ ನಿಂತಿದ್ದರು.
ನ್ಯಾಯಾಧೀಶರು ತೀರ್ಪನ್ನು ಓದುವ ವೇಳೆ ನ್ಯಾಯಾಲಯದಲ್ಲಿದ್ದ ಗೊರಿನೊವ್ ಪತ್ನಿ ಕಣ್ಣೀರಿಟ್ಟರು. ಆದರೆ ಇತರ ಬೆಂಬಲಿಗರು ಎದ್ದುನಿಂತು ಚಪ್ಫಾಳೆ ತಟ್ಟುವ ಮೂಲಕ ಗೊರಿನೊವ್‌ರನ್ನು ಬೆಂಬಲಿಸಿದರು.