► ತವರೂರಲ್ಲೇ ದಾಖಲೆ ನಿರ್ಮಿಸಿದ ಅಜಾಝ್
ಮುಂಬೈ: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ಸರಣಿಯ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಝಿಲೆಂಡ್ ಬೌಲರ್ ಅಜಾಝ್ ಪಟೇಲ್ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಭಾರತ ಮೊದಲನೇ ಇನ್ನಿಂಗ್ಸ್ ನಲ್ಲಿ 325 ಕ್ಕೆ ಆಲೌಟ್ ಆಗಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ ಹತ್ತು ವಿಕೆಟ್ ಪಡೆದ ದಾಖಲೆ ನಿರ್ಮಾಣವಾಗಿದ್ದು ಇದು ಮೂರನೇ ಬಾರಿಯಾಗಿದೆ. 1956ರಲ್ಲಿ ಜೆಸ್ಸಿ ಲೇಕರ್ ಹತ್ತು ವಿಕೆಟ್ ಕಬಳಿಸಿದ್ದರೆ, 1999 ರಲ್ಲಿ ಭಾರತದ ಅನಿಲ್ ಕುಂಬ್ಳೆ ಹತ್ತು ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು.
ವಿಶೇಷವೆಂದರೆ ಅಜಾಝ್ ಪಟೇಲ್ ಮೂಲತಃ ಮುಂಬೈ ಮೂಲದವರೇ ಆಗಿದ್ದು, ತನ್ನ ತವರೂರಿನಲ್ಲಿ ಈ ಒಂದು ವಿಶಿಷ್ಟ ದಾಖಲೆಯನ್ನು ನಿರ್ಮಿಸಿ ತನ್ನ ಭಾರತ ಪ್ರವಾಸವನ್ನು ಸ್ಮರಣೀಯವಾಗಿಸಿದ್ದಾರೆ.