Home ಟಾಪ್ ಸುದ್ದಿಗಳು ಎಐಎಂಐಎಂ ಪಕ್ಷಕ್ಕೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಡ: ಅಸದುದ್ದೀನ್ ಉವೈಸಿ

ಎಐಎಂಐಎಂ ಪಕ್ಷಕ್ಕೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಡ: ಅಸದುದ್ದೀನ್ ಉವೈಸಿ

ಜೆಡಿಎಸ್ ಜೊತೆ ಮೈತ್ರಿ ಮಾಡಲ್ಲ ಎಂದ ಹೈದರಾಬಾದ್ ಸಂಸದ

ಬಿಜಾಪುರ: ಎಐಎಂಐಎಂ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಟೀಕಿಸುವ ಕಾಂಗ್ರೆಸ್ ಪಕ್ಷದ ವಿರುದ್ಧ ಅಸದುದ್ದೀನ್ ಉವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ನಮಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ. ಅದರ ನಾಯಕರಿಂದ ನಾವು ಕಲಿಯುದೇನು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

2023ರ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ ಅವರು, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕಳೆದ ಸಲವೂ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿರಲಿಲ್ಲ, ಕುಮಾರಸ್ವಾಮಿ ಅವರು ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ಈ ಮಧ್ಯೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಉವೈಸಿ , ನಮ್ಮ ಬಾಯಲ್ಲಿ ಯಾವತ್ತೂ ನೆರೆಯ ಶತ್ರು ರಾಷ್ಟ್ರವಾದ ಪಾಕಿಸ್ತಾನದ ಹೆಸರು ಬರುವುದಿಲ್ಲ. ಆದರೆ ಯತ್ನಾಳ್ ಅವರು ಮತ್ತೆ ಮತ್ತೆ ಆ ರಾಷ್ಟ್ರದ ಹೆಸರನ್ನು ಎತ್ತುವ ಮೂಲಕ ಶತ್ರು ರಾಷ್ಟ್ರದ ಮೇಲಿನ ಪ್ರೀತಿಯನ್ನು ಸಾಬೀತುಪಡಿಸುತ್ತಿದ್ದಾರೆ. ಪಾಕಿಸ್ತಾನದ ಮೇಲೆ ಅಷ್ಟು ಪ್ರೀತಿ ಯಾಕೆ ಎಂದು ಅವರು ಬಹಿರಂಗಪಡಿಸಬೇಕು. ಈ ರೀತಿ ಮಾಡಲು ಪ್ರಧಾನಿ ಮೋದಿ ಅವರು ಯತ್ನಾಳ್’ಗೆ ಹೇಳಿರಬಹುದು ಎಂದೂ ಅವರು ಕುಟುಕಿದರು.

Join Whatsapp
Exit mobile version