ಹೊಸದಿಲ್ಲಿ: ದೇಶದ ಎಲ್ಲಾ ಪ್ರಜೆಗಳೂ ಹಿಂದೂಗಳಾಗಿದ್ದು, ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ವಿಶ್ವಾಸಿಗಳ ಬಗ್ಗೆ ಅಹಿಂದುಗಳು ಎಂಬ ಪದಬಳಕೆ ಸಲ್ಲದು ಎಂಬ ಹೊಸ ನಿಯಮವೊಂದನ್ನು ಆರೆಸ್ಸೆಸ್ ಅನುಷ್ಠಾನಕ್ಕೆ ತಂದಿದೆ. ದೇಶದ ಎಲ್ಲಾ ಧರ್ಮದ ಪ್ರಜೆಗಳನ್ನು ನಾಲ್ಕು ತರದ ಹಿಂದೂಗಳಾಗಿ ಪರಿಗಣಿಸಿ ಅಭಿಮಾನಿ ಹಿಂದೂ, ಸಂದೇಹಿ ಹಿಂದೂ, ಸೌಹಾರ್ದವಿಲ್ಲದ ಹಿಂದೂ ಹಾಗೂ ಅಜ್ಞಾನಿ ಹಿಂದೂ ಈ ನಾಲ್ಕು ವಿಭಾಗಗಳಾಗಿ ಆರೆಸ್ಸೆಸ್ ವಿಭಜಿಸಿದೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂಘಟನಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ‘ಅಹಿಂದೂಗಳು’ ಪದವನ್ನು ಬಳಸಬಾರದು ಎಂಬ ಆದೇಶ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಘ ಪರಿವಾರದ ಹಿರಿಯ ನಾಯಕರೊಬ್ಬರು“ಹಿಂದೂ ಎಂಬುದು ಜೀವನ ವಿಧಾನವಾಗಿದೆ. ಸಂಘದಲ್ಲಿರುವ ನಾವು ಪ್ರತಿಯೊಬ್ಬ ಪ್ರಜೆಯನ್ನು ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ಯಾವಾಗಲೂ ಹಿಂದೂ ಎಂದು ನಂಬುತ್ತೇವೆ. ನಂತರ ಇಸ್ಲಾಮಿಕ್ ಮತ್ತು ಪಾಶ್ಚಿಮಾತ್ಯ ಆಕ್ರಮಣಗಳು ಸಂಭವಿಸಿದ ಪರಿಣಾಮವಾಗಿ ನಮ್ಮಲ್ಲಿ ಕೆಲವರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಂತಹ ಇತರ ಧರ್ಮಗಳಿಗೆ ಮತಾಂತರಗೊಂಡಿದ್ದಾರೆ. ಆರಾಧನೆಯ ವಿಧಾನವು ವಿಭಿನ್ನವಾಗಿರಬಹುದು, ಆದರೆ ಪ್ರತಿಯೊಬ್ಬ ಭಾರತೀಯನ ಜೀವನ ವಿಧಾನ ಹಿಂದೂ ಧರ್ಮವಾಗಿದೆ. ಆದ್ದರಿಂದ ಎಲ್ಲಾ ಭಾರತೀಯರು ರಾಷ್ಟ್ರೀಯ ಗುರುತಿನ ಮೂಲಕ ಹಿಂದೂಗಳಾಗಿದ್ದಾರೆ ಎಂದು ಹೇಳಿದರು.