Home ಟಾಪ್ ಸುದ್ದಿಗಳು ಕೇರಳದವರನ್ನೂ ಕೆರಳಿಸಿದ ‘ಅಗ್ನಿಪಥ’

ಕೇರಳದವರನ್ನೂ ಕೆರಳಿಸಿದ ‘ಅಗ್ನಿಪಥ’

ತಿರುವನಂತಪುರ: ಕೇಂದ್ರದ ಹೊಸ ಅಗ್ನಿಪಥ ಯೋಜನೆಯು ಕೇರಳದ ಜನರನ್ನೂ ಕೆರಳಿಸಿ ಇಂದು ಬೀದಿಗಿಳಿದು ಪ್ರತಿಭಟಿಸುವಂತೆ ಮಾಡಿದೆ.

ತಿರುವನಂತಪುರದಲ್ಲಿ ಮಿಲಿಟರಿ ಸೇರುವ ತಯಾರಿ ನಡೆಸಿದ್ದ ಸಾವಿರಾರು ಜನರು ರಾಜಭವನದತ್ತ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿ ಅಗ್ನಿಪಥ ಯೋಜನೆಯನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿದರು.

‘ಜಸ್ಟಿಸ್ ಫಾರ್ ದ ಆರ್ಮಿ ಸ್ಟೂಡೆಂಟ್ಸ್’ ಎಂದರೆ ಸೇನಾ ವಿದ್ಯಾರ್ಥಿಗಳಿಗೆ ನ್ಯಾಯ (ನೀಡಿ) ಎಂಬ ಬ್ಯಾನರಿನಡಿ ಪ್ರತಿಭಟನಕಾರರು ಬೀದಿಗಿಳಿದು ರೋಷ ಪ್ರಕಟಿಸಿದರು. ಕೂಡಲೆ ಒಕ್ಕೂಟ ಸರಕಾರವು ಬಾಕಿ ಇರುವ 2021ರ ಸಿಇಇ- ಕಮಿಶನ್ ಎಂಟ್ರೆನ್ಸ್ ಪರೀಕ್ಷೆ ನಡೆಸುವಂತೆ ಹಕ್ಕೊತ್ತಾಯ ಮಂಡಿಸಿದರು. ಪ್ರತಿಭಟನಕಾರರು ಯಾವುದೇ ರಾಜಕೀಯ ಪಕ್ಷದ ಪರ ಬ್ಯಾನರ್ ಇಲ್ಲವೇ ಬಾವುಟ ಪ್ರದರ್ಶಿಸಲಿಲ್ಲ.

ಕೋಝಿಕ್ಕೋಡ್ ನಲ್ಲಿಯೂ ಅದೇ ಮಾದರಿಯ ಸ್ಥಿತಿ ಕಂಡುಬಂತು.ಸೇನಾ ನೇಮಕಾತಿಗೆ ತಯಾರಿ ನಡೆಸಿದ್ದ ಸಾವಿರಾರು ಜನರು ಸ್ಥಳೀಯ ರೈಲು ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪೊಲೀಸರು ಪೂರ್ಣ ಬಂದೋಬಸ್ತು ಮಾಡಿ ಉತ್ತರ ಭಾರತದಂತೆ ಎಲ್ಲೂ ಹಿಂಸಾಚಾರ ಆಗದಂತೆ ಎರಡೂ ಕಡೆ ನೋಡಿಕೊಂಡರು.

ಕೇಂದ್ರ ಸರಕಾರವು ಸಿಇಇ ಪರೀಕ್ಷೆಯನ್ನು ಸಾಕಷ್ಟು ಬಾರಿ ಮುಂದೂಡಿದೆ ಎಂದು ಒಬ್ಬರು ಪ್ರತಿಭಟನಕಾರರು ಮಾಧ್ಯಮದವರಿಗೆ ಹೇಳಿದರು. ಆದರೆ ಕೇಂದ್ರವು ಎನ್ ಡಿಎ- ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಎಸ್ಎಸ್ ಬಿ ಪರೀಕ್ಷೆಗಳನ್ನು ಮಾಮಾಲಿನಂತೆ ನಡೆಸಿದೆ ಎಂದೂ ಅವರು ಹೇಳಿದರು.

“ಅನಿಯಂತ್ರಿತ ಮುಂದೂಡುವಿಕೆಯಿಂದಾಗಿ ಸೇನೆ ಸೇರಲು ತಯಾರಿ ನಡೆಸಿದ್ದ ಸಾವಿರಾರು ಜನ ಯುವಕರು ಹತಾಶೆಗೆ ಸಿಲುಕಿದ್ದಾರೆ. ಕೆಲಸಕ್ಕಾಗಿ ಕೆಲವರು ತುಂಬ ಕಷ್ಟಪಟ್ಟು ತಯಾರಿ ನಡೆಸಿದ್ದರು. ಸಾಕಷ್ಟು ಹಣ ವೆಚ್ಚ ಮಾಡಿ ಖಾಸಗಿ ಸಂಸ್ಥೆಗಳು ನೀಡುವ ತರಬೇತಿ ಪಡೆದು ಕಾಯುತ್ತಿರುವವರೂ ಇದ್ದಾರೆ ಎಂದೂ ಅವರು ಹೇಳಿದರು.

ಕೇರಳದ ಸಿಪಿಎಂ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಕೇಂದ್ರದ ಅಗ್ನಿಪಥ ಯೋಜನೆಯನ್ನು ತೀವ್ರವಾಗಿ ಟೀಕಿಸಿವೆ.

Join Whatsapp
Exit mobile version