ನವದೆಹಲಿ: ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಯ ಆಧಾರದಲ್ಲಿ ಅವರ ಭಾಗೀದಾರಿಕೆಯನ್ನು ಖಾತರಿಪಡಿಸಲು ಜಾತಿ ಆಧಾರದಲ್ಲಿ ಜನಗಣತಿ ಮತ್ತು ಸಮರ್ಪಕ ಮೀಸಲಾತಿ ನೀಡಬೇಕು ಎಂಬ ನಿರ್ಣಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಅಂಗೀಕರಿಸಿದೆ.
ಸಕಾರಾತ್ಮಕ ಕ್ರಮದ ವಿಶಾಲ ವ್ಯವಸ್ಥೆ ಮತ್ತು ಇತರ ಪೂರಕ ಕಾರ್ಯವಿಧಾನಗಳ ಹೊರತಾಗಿಯೂ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಸ್ಥರವು ನಿರಂತರವಾಗಿ ಕುಸಿಯುತ್ತಾ ಸಾಗುತ್ತಿದೆ ಎಂದು ಎನ್.ಇ.ಸಿ. ಹೇಳಿದೆ. ಸಂಸತ್ತಿನಲ್ಲಿ ಇತ್ತೀಚಿಗೆ ಬಹಿರಂಗಪಡಿಸಲಾದ ಎರಡು ವಿಚಾರಗಳು ಈ ವಾಸ್ತವದ ಬಗ್ಗೆ ಗಮನ ಸೆಳೆಯುತ್ತದೆ. ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಇತ್ತೀಚಿಗೆ ರಾಜ್ಯಸಭೆಯಲ್ಲಿ ತಿಳಿಸಿರುವ ಪ್ರಕಾರ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ದೇಶದ ಪ್ರಖ್ಯಾತ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿಯನ್ನು ಅತಿಹೆಚ್ಚಿನ ಸಂಖ್ಯೆಯಲ್ಲಿ ತೊರೆದಿದ್ದಾರೆ.
ಒಂದೆಡೆ ಸಮರ್ಪಕ ಪ್ರಾತಿನಿಧ್ಯದ ಸಾಂವಿಧಾನಿಕ ಉದ್ದೇಶದ ಗುರಿಸಾಧನೆಯು ಬಹಳ ದೂರ ಉಳಿದಿದ್ದು, ಅಲ್ಲಿ ಮೀಸಲಾತಿ ವ್ಯವಸ್ಥೆಯು ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದೆ ಎಂಬುದರ ಬಗ್ಗೆಯೂ ಪಾಪ್ಯುಲರ್ ಫ್ರಂಟ್ ಎನ್.ಇ.ಸಿ. ಬೊಟ್ಟು ಮಾಡಿದೆ. ಓಬಿಸಿಯ ಹಲವು ಹುದ್ದೆಗಳು ಖಾಲಿ ಬಿದ್ದಿವೆ ಎಂದು ಶಿಕ್ಷಣ ಮಂತ್ರಿ ಸದನದಲ್ಲಿ ಹೇಳಿರುವ ವಿಚಾರವೂ ಅಚ್ಚರಿದಾಯಕವಾಗಿದೆ. ಇದು ಕೆನೆಪದರದಂತಹ ವಿಚಾರಗಳು ಯಾವ ರೀತಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಬಹುದೊಡ್ಡ ಸಂಖ್ಯೆಯನ್ನು ಮೀಸಲಾತಿಯಿಂದ ವಂಚಿಸುವ ಅಸ್ತ್ರವಾಗಿಬಿಟ್ಟಿದೆ ಎಂಬುದರ ಸ್ಪಷ್ಟ ಪುರಾವೆಯಾಗಿದೆ.
ಈ ಮಧ್ಯೆ, ಆಡಳಿತ ವರ್ಗ ಮತ್ತು ಹಲವು ವಿಪಕ್ಷಗಳು ಸೇರಿ ಮೀಸಲಾತಿ ವಿಚಾರವನ್ನೇ ದುರ್ಬಲಗೊಳಿಸುತ್ತಿವೆ. ಆರ್ಥಿಕ ಆಧಾರದಲ್ಲಿ ಮೀಸಲಾತಿ ನೀಡುವುದು ಮೇಲ್ವರ್ಗದ ಯೋಜನೆಯ ಭಾಗವಾಗಿದೆ. ಸಾಮಾಜಿಕ – ಶೈಕ್ಷಣಿಕ ಹಿಂದುಳಿಯುವಿಕೆ ಮತ್ತು ಕಡಿಮೆ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಸಕಾರಾತ್ಮಕ ಕಾರ್ಯವಿಧಾನ ಸಾಂವಿಧಾನಿಕ ಮಾನದಂಡವನ್ನು ನಿರ್ಲಜ್ಜವಾಗಿ ಅಪಹರಿಸಲು ಇದನ್ನು ಮಾಡಲಾಗಿದೆ. ಮುಂದುವರಿದ ಜಾತಿಗಳ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗ(ಇ.ಡಬ್ಲ್ಯೂ.ಎಸ್. ರಿಸರ್ವೇಷನ್)ಗಳಿಗೆ ಎಸ್ಸಿ, ಎಸ್ಟಿ ಮತ್ತು ಓಬಿಸಿಯ ಅವಕಾಶಗಳನ್ನು ಕಸಿದು ಮೀಸಲಾತಿ ನೀಡಲಾಯಿತು. ಆರ್ಥಿಕವಾಗಿ ಸಬಲರಾಗಿರುವ ಮತ್ತು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಬಹಳಷ್ಟು ಪ್ರಾತಿನಿಧ್ಯ ಹೊಂದಿರುವ ಮುಂದುವರಿದ ಸಮುದಾಯಗಳೂ ಒಂದರ ನಂತರ ಒಂದಾಗಿ ಮುಂದೆ ಬಂದು ಮೀಸಲಾತಿಗಾಗಿ ಒತ್ತಾಯಿಸುತ್ತಿದ್ದಾರೆ.
ಆದರೆ ಮುಸ್ಲಿಮರಿಗೆ ಇನ್ನು ಕೂಡ ಯಾವುದೇ ಮೀಸಲಾತಿಯನ್ನು ನಿರ್ಧರಿಸಲಾಗಿಲ್ಲ. ಅದೇ ವೇಳೆ ಎಲ್ಲಾ ವರದಿಗಳು ಮುಸ್ಲಿಮರನ್ನು ದೇಶದ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಸೇರಿಸಿವೆ. ಮಹಾರಾಷ್ಟ್ರ ಸರಕಾರವು ಪ್ರಾರಂಭದಲ್ಲಿ ಮುಸ್ಲಿಮರಿಗೆ ಮತ್ತು ಮರಾಠರಿಗೆ ಜೊತೆಯಾಗಿ ಮೀಸಲಾತಿಯನ್ನು ನೀಡುವ ಬಗ್ಗೆ ಹೇಳಿತ್ತಾದರೂ, ಅಧಿಕಾರಕ್ಕೇರಿದ ನಂತರ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್ ಬೇಡಿಕೆಯನ್ನು ರದ್ದುಪಡಿಸಿದ ಬಳಿಕವೂ ಕೇವಲ ಮರಾಠರಿಗಷ್ಟೇ ಮೀಸಲಾತಿಯನ್ನು ನಿಗದಿಪಡಿಸಿತು.
ಜಾತಿ ಆಧಾರದಲ್ಲಿ ಜನಗಣತಿ ನಡೆಸಲು ಸರಕಾರವು ಬಯಸದಿರುವುದು ಕೂಡ ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತೊಂದು ದೊಡ್ಡ ಸವಾಲಾಗಿದೆ. ಜಾತಿ ಆಧಾರದಲ್ಲಿ ಮಾಹಿತಿಯನ್ನು ಕಲೆಹಾಕಬೇಕು ಎಂಬುದು ದೇಶದ ಹಿಂದುಳಿದ ವರ್ಗಳ ದೀರ್ಘ ಸಮಯದಿಂದ ಉಳಿದುಕೊಂಡಿರುವ ಬೇಡಿಕೆಯಾಗಿದೆ. ಎಲ್ಲಾ ಪ್ರಕಾರಗಳಲ್ಲೂ ಜಾತಿಯು ಮಹತ್ವ ಹೊಂದಿರುವಂತಹ ಒಂದು ಸಮಾಜದಲ್ಲಿ, ಶತಮಾನದಷ್ಟು ಹಳೆಯದಾದ ಮಾಹಿತಿಗಳ ಮೇಲೆ ಎಲ್ಲಾ ಸಕಾರಾತ್ಮಕ ಕ್ರಮಗಳು ಮತ್ತು ಅಭಿವೃದ್ಧಿ ಯೋಜನೆಯನ್ನು ನಮಗೆ ನಿರ್ಧರಿಸಲು ಸಾಧ್ಯವಿಲ್ಲ. ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಯೋಜನೆಗಳ ಸಮಾನ ವಿತರಣೆಗಾಗಿ ಜಾತಿಗಳ ನಿಖರ ಮತ್ತು ಸಮರ್ಪಕ ಮಾಹಿತಿಯು ಅತ್ಯಗತ್ಯವಾಗಿದೆ. ಮೀಸಲಾತಿಯನ್ನು ದುರ್ಬಲಗೊಳಿಸುತ್ತಾ ಆರ್ಥಿಕವಾಗಿ ದುರ್ಬಲರಾದ ವರ್ಗಗಳಿಗೆ ಮೀಸಲಾತಿ ನೀಡುವ ಮತ್ತು ಕೆನೆಪದರವನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿರುವುದನ್ನು ಗಮನಿಸಿದರೆ ಇವೆಲ್ಲವೂ ವಾಸ್ತವ ಅಂಕಿಅಂಶಗಳ ಆಧಾರದಲ್ಲಿ ನಡೆದಿರುವುದಲ್ಲ ಬದಲಿಗೆ ಊಹೆಯ ಆಧಾರದಲ್ಲಾಗಿತ್ತು ಎಂಬುದು ಸ್ಟಷ್ಟವಾಗುತ್ತದೆ.
ಆದುದರಿಂದ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು, ಆಡಳಿತ, ಶಿಕ್ಷಣ ಮತ್ತು ಸಂಪತ್ತಿನ ಹಂಚಿಕೆಯಲ್ಲಿ ಎಲ್ಲಾ ವರ್ಗಗಳಿಗೆ ಅವರ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯವನ್ನು ಖಾತರಿಪಡಿಸಲು ಜಾತಿ ಆಧಾರದಲ್ಲಿ ಜನಗಣತಿ ಮತ್ತು ಸೂಕ್ತ ಮೀಸಲಾತಿ ನೀಡಬೇಕೆಂದು ಆಗ್ರಹಿಸುತ್ತದೆ. ಜೊತೆಗೆ, ಪ್ರಾತಿನಿಧ್ಯ ಮತ್ತು ಮೀಸಲಾತಿಗೆ ಸಂಬಂಧಿಸಿದ ವಿಚಾರಗಳಲ್ಲಿ ತೀರ್ಪು ನೀಡುವ ವೇಳೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮಾನದಂಡಗಳನ್ನು ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯಬೇಕೆಂದೂ ಪಾಪ್ಯುಲರ್ ಫ್ರಂಟ್ ಎನ್.ಇ.ಸಿ.ನ್ಯಾಯಾಂಗಕ್ಕೆ ಮನವಿ ಮಾಡಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.