ಬೆಳಗಾವಿ: ಆಸ್ತಿ ವಿಚಾರದ ಹಲವು ವರ್ಷಗಳ ವೈಮನಸ್ಸಿನಿಂದಾಗಿ ನನ್ನ ಸಹೋದರನ ಕುಮ್ಮಕ್ಕಿನಿಂದ ದೂರದ ಸಂಬಂಧಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಚಲನಚಿತ್ರ ನಟ ಶಿವರಂಜನ್ ಬೋಳನ್ನವರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಅವರ ಮೇಲೆ ಗುಂಡಿನ ದಾಳಿ ನಡೆದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಐದು ಸುತ್ತು ಗುಂಡು ಹಾರಿಸಲಾಯಿತು. ಅತ್ತಿತ್ತ ಓಡಾಡಿ ನಾನು ತಪ್ಪಿಸಿಕೊಂಡೆ. ಹೀಗಾಗಿ ಗುಂಡು ತಗಲಿಲ್ಲ. ಪಟ್ಟಣದ ಇಂಚಲ ರಸ್ತೆಯ ನಮ್ಮ ನಿವಾಸದ ಮುಂದೆ ಬೈಕ್ ಮೇಲೆ ಬಂದ ಆರೋಪಿಗಳು ಗುಂಡು ಹಾರಿಸಿ ಪರಾರಿಯಾದರು. ನನ್ನ ಸಹೋದರ ಸಂಬಂಧಿ ಇದರಲ್ಲಿ ಇರುವ ಬಗ್ಗೆ ಎಫ್.ಐ.ಆರ್. ಮಾಡಿಸಿದ್ದೇನೆ ಎಂದರು.
ಯಾವ ಕಾರಣಕ್ಕೆ ಕೊಲೆ ಮಾಡಲು ಮುಂದಾಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ತಿಳಿದಿಲ್ಲ. ಆದರೆ ನಾನು ಯಾರಿಗೂ ಕೆಟ್ಟದನ್ನು ಬಯಸಿಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯಿರಿ ಎಂದು ಅವರಿಗೂ ಸಾಕಷ್ಟು ಬಾರಿ ತಿಳಿಸಿದ್ದೇನೆ. ಹತಾಷರಾಗಿ ನನ್ನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ನೈಜ ಕಾರಣ ಪೊಲೀಸರ ತನಿಖೆಯಿಂದ ಗೊತ್ತಾಗಲಿದೆ ಎಂದರು.
ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ತಡರಾತ್ರಿ ಆರೋಪಿ ಮಹೇಶ ನಾವಲಗಟ್ಟಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದು, ಆ ವ್ಯಕ್ತಿ ಶಿವರಂಜನ್ ಅವರ ಹಿರಿಯ ಸಹೋದರನ ಪತ್ನಿಯ ಅಕ್ಕನ ಮಗ ಎಂದು ತಿಳಿದು ಬಂದಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ತಡರಾತ್ರಿಯೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್. ಸಾತೇನಹಳ್ಳಿ, ಪಿಎಸ್ಐ ಪ್ರವೀಣ ಕೋಟಿ, ಪಟ್ಟಣದ ಪೊಲೀಸ್ ಅಧಿಕಾರಿಗಳು, ಶ್ವಾನದಳ ಸಿಬ್ಬಂದಿ, ಬೆರಳಚ್ಚು ತಜ್ಙರು ಬಂದು ಮಹಜರು ನಡೆಸಿದ್ದಾರೆ.