ನವದೆಹಲಿ : ʼಝೀ ನ್ಯೂಸ್ʼ (ಹಿಂದಿ ಸುದ್ದಿ ವಾಹಿನಿ) ಭಾನುವಾರ ಪೋಸ್ಟ್ ಮಾಡಿದ್ದ ಕೋಮುವಾದಿ ಭಾವನೆಯ ಸುದ್ದಿಗೆ ಸಂಬಂಧಿಸಿದ ಟ್ವೀಟ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಕೇಂದ್ರ ಸರಕಾರದ ಹೊಸ ಐಟಿ ನಿಯಮಗಳನ್ವಯ ನೋಟಿಸ್ ಜಾರಿಗೊಳಿಸಿದ್ದಾರೆ.
“ನನ್ನ ಪ್ರಕಾರ, ಹೊಸ ಐಟಿ ನಿಯಮಗಳನ್ನು ಜಾರಿಗೊಳಿಸಲು ಇದು ಸರಿಯಾದ ಸಮಯವಾಗಿದೆ. ನಿನ್ನೆ ಕೋಮುವಾದಿ ಮತ್ತು ತಾರತಮ್ಯದ ಟ್ವೀಟ್ ಪೋಸ್ಟ್ ಮಾಡಿದ್ದಕ್ಕಾಗಿ ಝೀ ನ್ಯೂಸ್ ವಿರುದ್ಧ ನಾನು ಹೊಸ ಐಟಿ ನಿಯಮಗಳ ಪ್ರಕಾರ ನೋಟಿಸ್ ನೀಡಿದ್ದೇನೆ. ಆರ್ ಎಸ್ ಪ್ರಸಾದ್ ಅವರು ಗಮನಿಸುತ್ತಿದ್ದಾರೆಂದು ಭಾವಿಸುತ್ತೇನೆ, ಯಾಕೆಂದರೆ ನಾನು ನಿಮ್ಮ ಕಾನೂನನ್ನು ಈ ಪ್ರಕರಣದಲ್ಲಿ ಪೂರ್ಣವಾಗಿ ಬಳಸಿಕೊಳ್ಳಲು ಬಯಸಿದ್ದೇನೆ” ಎಂದು ಸಾಕೇತ್ ಗೋಖಲೆ ಟ್ವೀಟ್ ಮಾಡಿದ್ದಾರೆ.
ಪೂರ್ವಾಗ್ರಹ ಪೀಡಿತ ಮತ್ತು ಇಸ್ಲಾಮೊಫೋಬಿಕ್ ವರದಿಗಾರಿಕೆಗೆ ಕುಖ್ಯಾತಿ ಪಡೆದಿರುವ ನ್ಯೂಸ್ ಚಾನೆಲ್ ನಿನ್ನೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ತನ್ನ ಅಧಿಕೃತ ಪೇಜ್ ನಲ್ಲಿ ಟ್ವೀಟ್ ಒಂದನ್ನು ಮಾಡಿತ್ತು. “ಮುಸ್ಲಿಂ ಜನಸಂಖ್ಯೆ ಹೆಚ್ಚಿಸಲು ನಿಸರ್ಗ ನಿಯಮ ಒಂದು ನೆಪವಷ್ಟೇ” ಎಂಬ ಕಾರ್ಯಕ್ರಮವೊಂದರ ಕುರಿತು ಚಾನೆಲ್ ಹಿಂದಿಯಲ್ಲಿ ಟ್ವೀಟ್ ಮಾಡಿತ್ತು ಎಂದು ವರದಿಗಳು ತಿಳಿಸಿವೆ. ಮುಸ್ಲಿಂ ವಿರೋಧಿ ಭಾವನೆಗಳು ಮೂಡುವಂತಹ ಹಲವು ಕಾರ್ಯಕ್ರಮಗಳನ್ನು ಈ ಸುದ್ದಿ ವಾಹಿನಿಯು ಈ ಹಿಂದೆಯೂ ಸಾಕಷ್ಟು ಬಾರಿ ಪ್ರಸಾರಿಸಿದೆ.