ಬೆಂಗಳೂರು: ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗದವರು ನಡೆಸುತ್ತಿರುವ ಪತ್ರಿಕೆಗಳಿಗೂ ಜಾಹೀರಾತು ಬಿಡುಗಡೆ ಮಾಡಲು ಈಗಾಗಲೇ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ತಿಗಿಂದು ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕೆ. ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಸರ್ಕಾರದ ಅಂಗೀಕೃತ ಏಜೆನ್ಸಿ ಆದ ಎಂ.ಸಿ ಆ್ಯಂಡ್ ಎ ಮೂಲಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಏಜೆನ್ಸಿಗಳ ಮೂಲಕ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನಡೆಸುತ್ತಿರುವ ಪತ್ರಿಕೆಗಳಿಗೆ ಸರ್ಕಾರಿ ಆದೇಶದಂತೆ ಈಗಾಗಲೇ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಹಿಂದುಳಿದ ವರ್ಗಗದವರು ನಡೆಸುತ್ತಿರುವ ಪತ್ರಿಕೆಗಳು ಇವೆ. ಸುಮಾರು ಐದಾರೂ ವರ್ಷಗಳಿಂದ ಪತ್ರಿಕೆಗಳನ್ನು ನಡೆಸುತ್ತಿರುವವರನ್ನು ಪಟ್ಟಿ ಮಾಡಿ ಅವರಿಗೆ ಒಂದು ತರಬೇತಿ ನೀಡಿ, ನಂತರ ಅಂತಹ ಪತ್ರಿಕೆಗಳಿಗೂ ಜಾಹೀರಾತು ಬಿಡುಗಡೆ ಮಾಡಲು ಅನುದಾನ ಬಿಡುಗಡೆ ಮಾಡಿ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು