ಸತೀಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಲಿ: ಪ್ರಲ್ಹಾದ್ ಜೋಶಿ

Prasthutha|

ಹುಬ್ಬಳ್ಳಿ: ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ಗೆ ನಿಜವಾದ ಬದ್ಧತೆ ಇದ್ದರೆ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸವಾಲ್ ಎಸೆದಿದ್ದಾರೆ.

- Advertisement -

ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮದ ಬಗ್ಗೆ ಮಾತಾಡುವ ಚಾಳಿ ಬಿಡಲಿ, ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಬಗ್ಗೆ ನಿಜವಾದ ಬದ್ಧತೆ ಇದ್ದರೆ ಸತೀಶ್ ಜಾರಕಿಹೊಳಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದರು.

ಹಿಂದೂ ಪದದ ಬಗ್ಗೆ ಮಾತಾಡಿದ್ದ ಸತೀಶ್ ಜಾರಕಿಹೊಳಿ, ಪಕ್ಷ ಹೇಳಿದ ಮೇಲೂ ಕ್ಷಮೆ ಕೋರಿಲ್ಲ. ನಾನು ಕ್ಷಮೆ ಕೋರುವುದಿಲ್ಲ, ಕೇವಲ ವಿಷಾದ ವ್ಯಕ್ತಪಡಿಸುತ್ತೇನೆ ಅಷ್ಟೇ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನನ್ನ ಹೇಳಿಕೆಗೆ ನಾನು ಬದ್ಧ ಅಂತ ಸತೀಶ್ ಹೇಳಿಕೆ ಕೊಟ್ಟಿದ್ದಾರೆ. ಹಾಗಿದ್ದರೆ ಸತೀಶ್ ಜಾರಕಿಹೊಳಿ ಅವರ ಮೇಲೆ ಕಾಂಗ್ರೆಸ್ ಪಾರ್ಟಿಗೆ ಕಂಟ್ರೋಲ್ ಇಲ್ಲವೇ..? ಪಕ್ಷದ ಕಾರ್ಯಾಧ್ಯಕ್ಷರ ಮೇಲೆ ಪಕ್ಷಕ್ಕೆ ಕಂಟ್ರೋಲ್ ಇಲ್ಲ ಅಂದರೆ ಏನರ್ಥ..? ಎಂದು ಪ್ರಶ್ನಿಸಿದ್ದಾರೆ.

- Advertisement -

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಲ್ಲದೇ, ಶಿವಾಜಿ ಮಹಾರಾಜರ ಬಗ್ಗೆಯೂ ಜಾರಕಿಹೊಳಿ ಅವಮಾನಕರ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಶಿವಾಜಿ ಮಹಾರಾಜರಿಗೆ ಅವರ ಪುತ್ರ ಸಾಂಬಾಜಿ ಅವರು ವಿಷ ಹಾಕಿದ್ದರು ಎಂಬ ವಿಚಿತ್ರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಇದನ್ನ ಒಪ್ಪಿಕೊಳ್ಳುತ್ತಾ..? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ. ಇಂತಹ ಹೇಳಿಕೆಗಳನ್ನ ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ ಎಂದಾದರೆ ಪಕ್ಷ ಹೇಳಿಕೆ ಕೊಟ್ಟವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.

ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷ ಚುನಾವಣೆಗಳು ಬಂದಾಗ ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡಿ ನಾವು ಹಿಂದೂ ವಿರೋಧಿಗಳಲ್ಲ ಎಂದು ಹೇಳಿಕೊಳ್ತಾರೆ. ಆದರೆ ಆ ಪಕ್ಷದ ನಾಯಕರು ಹಿಂದೂ ವಿರೋಧಿ ಚಟುವಟಿಕೆಗಳನ್ನು ನಡೆಸ್ತಾರೆ. ಹಿಂದೂ ವಿರೋಧಿ ಕೃತ್ಯಗಳಲ್ಲಿ ತೊಡಗಿದ ಆಮ್ ಆದ್ಮಿ ಪಕ್ಷದ ರಾಜೇಂದ್ರ ಗೌತಮ್ ಅವರನ್ನು ಗುಜರಾತ್ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರನ್ನಾಗಿ ಮಾಡಿದೆ. ಎರಡೂ ಪಕ್ಷಗಳ ನಿಜಬಣ್ಣ ಬಯಲಾಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

Join Whatsapp
Exit mobile version