Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಮತ್ತೆ ಆ್ಯಸಿಡ್ ದಾಳಿ: ಮದುವೆಗೆ ಒಪ್ಪದ ಮಹಿಳೆ ಮೇಲೆ ಮೃಗೀಯ ಕೃತ್ಯ !

ಬೆಂಗಳೂರಿನಲ್ಲಿ ಮತ್ತೆ ಆ್ಯಸಿಡ್ ದಾಳಿ: ಮದುವೆಗೆ ಒಪ್ಪದ ಮಹಿಳೆ ಮೇಲೆ ಮೃಗೀಯ ಕೃತ್ಯ !

ಬೆಂಗಳೂರು: ಸುಂಕದಕಟ್ಟೆ ಬಳಿ ಯುವತಿಯೊಬ್ಬರ ಮೇಲೆ ಭಗ್ನಪ್ರೇಮಿ ನಡೆಸಿದ ಆ್ಯಸಿಡ್ ದಾಳಿ ಕೃತ್ಯವು ಮಾಸುವ ಮುನ್ನವೇ ನಗರದಲ್ಲಿ ಮಹಿಳೆಯೊಬ್ಬರ ಮೇಲೆ ಇಂದು ಹಾಡುಹಗಲೇ ಆ್ಯಸಿಡ್ ದಾಳಿ ನಡೆದಿದೆ. ವಿವಾಹವಾಗಲು ಒಪ್ಪದಿದ್ದರಿಂದ ಮೂರು ಮಕ್ಕಳಿದ್ದ 32ವರ್ಷದ ಮಹಿಳೆಯ ಮೇಲೆ ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಆ್ಯಸಿಡ್ ದಾಳಿ ನಡೆಸಿದ ಮೃಗೀಯ ಕೃತ್ಯ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.

ಆ್ಯಸಿಡ್ ದಾಳಿಗೊಳಗಾಗಿರುವ ಮಹಿಳೆಯ‌ ಮುಖಕ್ಕೆ ಕಣ್ಣಿಗೆ ಹಾನಿಯುಂಟಾಗಿದ್ದು ಸಂಜಯಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ದಾಳಿ ನಡೆಸಿ ಪರಾರಿಯಾಗಿರುವ ಮಹಿಳೆಯ ಸಹೋದ್ಯೋಗಿ ಗೋರಿಪಾಳ್ಯದ ಅರೋಪಿ ಅಹ್ಮದ್ ಸುಳಿವು ದೊರೆತಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದರು.

ಸಂತ್ರಸ್ತ ಮಹಿಳೆ ಹಾಗೂ ಆರೋಪಿಯು ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕರ್ನಾಟಕ ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.ಮಹಿಳೆಗೆ ವಿವಾಹವಾಗಿ ಮೂವರು ಮಕ್ಕಳಿದ್ದು ಪತಿಯನ್ನು ತೊರೆದಿದ್ದ ಆಕೆ ವಿಚ್ಛೇದನ ಪಡೆದಿದ್ದರು. ಆರೋಪಿಗೆ ಕೂಡ ಈಗಾಗಲೇ ವಿವಾಹವಾಗಿ ಒಬ್ಬ ಮಗನಿದ್ದು ಪತ್ನಿ ದೂರವಾಗಿದ್ದ ಆತ ವಿಚ್ಛೇದನ ಪಡೆದಿರಲಿಲ್ಲ ಒಂದೇ ಕಡೆ ಕೆಲಸ ಮಾಡುತ್ತಿದ್ದ ಇವರಿಬ್ಬರ ನಡುವೆ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಆಗಾಗ ವಿವಾಹದ ಪ್ರಸ್ತಾಪವಾಗಿತ್ತಾದರೂ‌ ಮೊದಲ ಮಗಳು ದೊಡ್ಡವಳಾಗಿದ್ದ ಕಾರಣದಿಂದ ಆಕೆ ಒಪ್ಪಿರಲಿಲ್ಲ ಇದೇ ವಿಚಾರವಾಗಿ ಇಬ್ಬರು ನಡುವೆ ಜಗಳ ಉಂಟಾಗಿತ್ತು ಎನ್ನಲಾಗಿದೆ.

ಕೆಲಸಕ್ಕೆ ಹೋಗಲು ಬೆಳಿಗ್ಗೆ 10ರ ವೇಳೆ ಕುಮಾರಸ್ವಾಮಿ ಲೇಔಟ್ ನ ಸಾರಕ್ಕಿ ಬಳಿ ಮಹಿಳೆಯು ನಡೆದುಕೊಂಡು ಹೋಗುತ್ತಿದ್ದು ಅಲ್ಲಿಗೆ ಬಂದ ಆರೋಪಿಯು ಮತ್ತೆ ವಿವಾಹದ ವಿಚಾರವಾಗಿ ಜಗಳ ಮಾಡಿದ್ದಾನೆ. ಆಕೆ ಒಪ್ಪದ ಹಿನ್ನೆಲೆಯಲ್ಲಿ ಸಂಚು ಮೊದಲೇ ಬಾಟಲಿಯಲ್ಲಿ ತುಂಬಿಕೊಂಡು ಬಂದಿದ್ದ ಆ್ಯಸಿಡ್ ನ್ನು ಮುಖದ ಮೇಲೆ ಎರಚಿ ಪರಾರಿಯಾಗಿದ್ದಾನೆ.ಮುಖ ಮುಚ್ಚಿಕೊಂಡು ಮುಖ್ಯರಸ್ತೆಗೆ ಬಂದು ಒದ್ದಾಡುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣವೇ ಧಾವಿಸಿ ಪರಿಶೀಲನೆ ನಡೆಸಿದಾಗ ಆ್ಯಸಿಡ್ ದಾಳಿಯಿಂದ ಮಹಿಳೆಯ ಮುಖಕ್ಕೆ ಕಣ್ಣಿಗೆ ಗಾಯವಾಗಿತ್ತು.

ವಾಸನ್ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆ ನಡೆಸಿ ಕಣ್ಣನ್ನು ಸ್ವಚ್ಛಗೊಳಿಸಲಾಗಿದ್ದು ಎಡಗಣ್ಣು ಕಾಣಿಸತೊಡಗಿದ್ದು ಬಲಗಣ್ಣಿಗೆ ಸ್ವಲ್ಪ ಪ್ರಮಾಣದ ಹಾನಿಯುಂಟಾಗಿದೆ.ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಾಗಿದೆ.
ಆರೋಪಿಯು ಎರಚಿರುವ ಆ್ಯಸಿಡ್ ಶೌಚಾಲಯ ಸ್ವಚ್ಛಗೊಳಿಸುವುದಾಗಿ ಡೈಲ್ಯೂಟ್ ಮಾಡಲಾಗಿದ್ದರಿಂದ ಹೆಚ್ಚಿನ ಹಾನಿ‌ ಸಂಭವಿಸಿಲ್ಲ ಎಂದು ತಿಳಿಸಿದರು. ಆರೋಪಿಯು ಆ್ಯಸಿಡ್ ಎಲ್ಲಿಂದ ಖರೀದಿಸಿದ ಎನ್ನುವುದರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಮೂರನೇ ದಾಳಿ:
ಕಳೆದ ಏಪ್ರಿಲ್ನಲ್ಲಿ‌‌ ಆರೋಪಿ ನಾಗೇಶ್ ಪ್ರೀತಿಗೆ ನಿರಾಕರಿಸಿದಕ್ಕೆ ಯುವತಿ ಮೇಲೆ‌ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ. ತಮಿಳುನಾಡಿನ ಆಶ್ರಮವೊಂದರಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ‌ ಕರೆತಂದಿದ್ದರು. ಈ ವೇಳೆ ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರ‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಈತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಮತ್ತೆ ಸೆರೆ ಹಿಡಿದಿದ್ದರು.
ಕಬ್ಬನ್‌ಪೇಟೆ 10ನೇ ಕ್ರಾಸ್ನಲ್ಲಿ ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ ನಡೆದಿತ್ತು.ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಗಾಯಾಳು ಮತ್ತು ಆರೋಪಿ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಕ್ಷುಲ್ಲಕ ವಿಚಾರಕ್ಕೆ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ,ಜನತಾ ಅದಕ್ ಡೈಲೂಟೇಡ್ ಸೆಲ್ಫುರಿಕ್ ಆ್ಯಸಿಡ್ ಎರಚಿ ಕ್ರೌರ್ಯ ಮೆರೆದಿದ್ದನು. ಈಗ ಇದು ನಗರದಲ್ಲಿ ಮೂರನೇ ದಾಳಿಯಾಗಿದೆ.

Join Whatsapp
Exit mobile version