Home ಕರಾವಳಿ ಕಾಣಿಯೂರು ಹಲ್ಲೆ ಪ್ರಕರಣದ ಆರೋಪಿಗಳನ್ನು ಕೊಲೆಯತ್ನ ಪ್ರಕರಣದಡಿ ಕೂಡಲೇ ಬಂಧಿಸಿ: ಡಿವೈಎಫ್ಐ

ಕಾಣಿಯೂರು ಹಲ್ಲೆ ಪ್ರಕರಣದ ಆರೋಪಿಗಳನ್ನು ಕೊಲೆಯತ್ನ ಪ್ರಕರಣದಡಿ ಕೂಡಲೇ ಬಂಧಿಸಿ: ಡಿವೈಎಫ್ಐ

ಮಂಗಳೂರು: ಕಾಣಿಯೂರು ಪ್ರದೇಶದಲ್ಲಿ ಜವಳಿ ಮಾರಾಟಮಾಡಲು ತೆರಳಿದ್ದ ಅಡ್ಡೂರಿನ ವ್ಯಾಪಾರಸ್ಥರಾದ ರಫೀಕ್ ಮತ್ತು ರಮೀಝ್ ಎಂಬವರ ಮೇಲೆ ಬಿಜೆಪಿ ಸಂಘಟಿತ ಗುಂಪೊಂದು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.


ಹಲ್ಲೆ ನಡೆಸಿದ ತಪ್ಪಿತಸ್ಥರನ್ನು ಕೊಲೆಯತ್ನ ಪ್ರಕರಣದಡಿ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ಹಾಗೂ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.


ಕಳೆದ ಹಲವಾರು ವರ್ಷಗಳಿಂದ ಮನೆ ಮನೆ ತೆರಳಿ ಬೆಡ್ ಶೀಟ್ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಅಡ್ಡೂರಿನ ರಫೀಕ್ ಮತ್ತು ರಮೀಝ್ ಅನ್ನುವ ವ್ಯಾಪಾರಿಗಳು ಮೊನ್ನೆ ಕಾಣಿಯೂರು ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ವ್ಯಾಪಾರಸ್ಥರು ಮುಸಲ್ಮಾನರು ಎಂಬ ಕಾರಣಕ್ಕೆ ಬಿಜೆಪಿ ಬೆಂಬಲಿತ ಅಕ್ರಮ ಕೂಟವೊಂದು ಮುಸ್ಲಿಂ ವ್ಯಾಪಾರಿಗಳ ಮೇಲೆ ಮುಗಿಬಿದ್ದು ಕಬ್ಬಿಣದ ಸರಳು, ದೊಣ್ಣೆ ಇನ್ನಿತರ ಆಯುಧಗಳಿಂದ ಕೈಕಾಲು ಮುರಿಯುವಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಲ್ಲದೆ ಅವರ ಮೈಮೇಲೆ ವಾಹನಗಳನ್ನು ಹತ್ತಿಸಿ ಕೊಲೆಯತ್ನಕ್ಕೂ ಪ್ರಯತ್ನಿಸಿರುತ್ತಾರೆ. ಸತತ ಎರಡು ಗಂಟೆಗಳ ಕಾಲ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರಕರಣ ನಡೆದು ಎರಡು ದಿನಗಳಾದರೂ ಪೊಲೀಸ್ ಇಲಾಖೆ ಈವರೆಗೆ ಯಾವೊಬ್ಬನನ್ನು ಬಂಧಿಸದೆ ಮತೀಯ ತಾರತಮ್ಯವನ್ನು ಎಸಗಿದೆ ಎಂದು ಅವರು ಆರೋಪಿಸಿದ್ದಾರೆ.


ಮುಸಲ್ಮಾನರನ್ನು ಗುರಿಯಾಗಿಸಿ ನಿರಂತರ ನಡೆಯುವಂತಹ ದಾಳಿಗಳಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು. ಮುಸ್ಲಿಂ ವ್ಯಾಪಾರಿಗಳಾದ ರಫೀಕ್ ಮತ್ತು ರಮೀಝ್ ಮೇಲಿನ ಮಾರಾಣಾಂತಿಕ ಹಲ್ಲೆಗೆ ಕಾರಣರಾದವರ ಮೇಲೆ ಕೊಲೆಯತ್ನ ಪ್ರಕರಣದಡಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸರಕಾರ ಸಂತ್ರಸ್ತರಿಗೆ ನಷ್ಟ ಪರಿಹಾರವನ್ನು ನೀಡಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp
Exit mobile version