ಬೆಂಗಳೂರು: ಯಲಹಂಕದ ಸಿಆರ್ ಪಿಎಫ್ ಕ್ಯಾಂಪಸ್ ಬಳಿ ಕಳೆದ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ವಿದೇಶಿ ಪ್ರಜೆ ಹಾಗೂ ಸಿಆರ್ ಪಿಎಫ್ ಸಬ್ ಇನ್ಸ್ಪೆಕ್ಟರ್ ಮೃತಪಟ್ಟಿದ್ದಾರೆ.
ಯಲಹಂಕದ ಸಿಆರ್ ಪಿಎಫ್ ಸಬ್ ಇನ್ಸ್ ಪೆಕ್ಟರ್ ಸ್ವಾಮಿಗೌಡ (54) ಹಾಗೂ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ಯಮನ್ ದೇಶದ ಅಮರ್ (22) ಮೃತಪಟ್ಟವರು.
ಯಲಹಂಕದ ಸಿಆರ್ ಪಿಎಫ್ ಕ್ಯಾಂಪಸ್ ನ ಪಶ್ಚಿಮದಿಂದ ಪೂರ್ವದ ಕಡೆ ರಾತ್ರಿ ಪಾಳಯದ ಕರ್ತವ್ಯದಲ್ಲಿದ್ದ ಸ್ವಾಮಿಗೌಡ ಅವರು ರಸ್ತೆ ದಾಟುತ್ತಿದ್ದಾಗ ಯಲಹಂಕ ಕಡೆಯಿಂದ ದೊಡ್ಡಬಳ್ಳಾಪುರ ಕಡೆ ಹೋಗುವ ರಸ್ತೆಯಲ್ಲಿ ಅತಿವೇಗ ಯಮಹಾ ದ್ವಿಚಕ್ರ ವಾಹನದಲ್ಲಿ ಬಂದ ಅಮರ್ ಡಿಕ್ಕಿ ಹೊಡೆದಿದ್ದಾರೆ. ಕೆಳಗೆ ಬಿದ್ದು ತಲೆ ಹಾಗೂ ಕೈ ಕಾಲುಗಳಿಗೆ ತೀವ್ರತರದ ಗಾಯಗಳಾಗಿದ್ದ ಸ್ವಾಮಿಗೌಡ ಅವರನ್ನು ತಕ್ಷಣ ಸಾರ್ವಜನಿಕರು ಆಸ್ಟರ್ ಆಸ್ಪತ್ರೆಗೆ ದಾಖಲು ಮಾಡಿದ್ದು,ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ಮೃತಪಟ್ಟಿದ್ದಾರೆ.
ಅಪಘಾತದ ರಭಸಕ್ಕೆ ಯಮಹಾ ಬೈಕ್ ಸವಾರ ಅಮರ್ ತಲೆ ಹಾಗೂ ಕೈ ಕಾಲುಗಳಿಗೆ ತೀವ್ರ ತರದ ಗಾಯಗಳಾಗಿದ್ದು ಆತನನ್ನು ಅಸ್ಟರ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಯಲಹಂಕ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ ಅವರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಸವಿತಾ ತಿಳಿಸಿದ್ದಾರೆ.