Home ಟಾಪ್ ಸುದ್ದಿಗಳು ಮಹಿಳೆ ಅವಿವಾಹಿತೆಯಾಗಿದ್ದರೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್

ಮಹಿಳೆ ಅವಿವಾಹಿತೆಯಾಗಿದ್ದರೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಮಹಿಳೆ ಅವಿವಾಹಿತೆ ಎಂಬ ಕಾರಣಕ್ಕೆ ಆಕೆಯ ಗರ್ಭಪಾತಕ್ಕೆ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠವು, ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021ರಲ್ಲಿ ತಂದಿರುವ ತಿದ್ದುಪಡಿಯು ಅವಿವಾಹಿತೆಯೂ ಒಳಗೊಳ್ಳುವಂತೆ ಪತಿಗೆ ಬದಲಾಗಿ ‘ಪಾರ್ಟ್ನರ್’ ಎಂಬ ಪದ ಬಳಸಿದೆ. ಈ ಕಾಯ್ದೆಯಲ್ಲಿ ಅವಿವಾಹಿತ ಮಹಿಳೆಯನ್ನು ಕೂಡ ಒಳಗೊಳ್ಳಲು ಇರುವ ಶಾಸನದ ಉದ್ದೇಶವನ್ನು ತೋರಿಸುತ್ತದೆ ಎಂದು ಹೇಳಿದೆ.

ಎಂಟಿಪಿ ಕಾಯ್ದೆಯ ಸೆಕ್ಷನ್‌ 3(2)(ಡಿ) ಅಡಿಯಲ್ಲಿ ವೈದ್ಯಕೀಯ ಮಂಡಳಿ ಸ್ಥಾಪಿಸಲು ದೆಹಲಿಯ ಏಮ್ಸ್ ಮುಖ್ಯಸ್ಥರಿಗೆ ಸೂಚಿಸಿದ ಪೀಠವು, ಆಕೆಯ ಜೀವಕ್ಕೆ ತೊಂದರೆಯಾಗದಂತೆ ಗರ್ಭಪಾತ ಮಾಡಿಸಲು ಆದೇಶಿಸಿದೆ.

ಲಿವ್-ಇನ್ ಸಂಬಂಧದಿಂದ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರು ತನಗೆ ಬೇಡವಾದ 24 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಜುಲೈ 16ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವಿವಾಹಿತೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ಅವಿವಾಹಿತೆ ಎಂಬ ಕಾರಣಕ್ಕೆ ಅರ್ಜಿದಾರಳಿಗೆ ಈ ಪ್ರಯೋಜನವನ್ನು ನಿರಾಕರಿಸುವಂತಿಲ್ಲ .ತನಗೆ ಬೇಡವಾದ ಭ್ರೂಣವನ್ನು ವಿಧಿಯಿಲ್ಲದೆ ಅನುಭವಿಸುವಂತೆ ಒತ್ತಾಯಿಸುವುದು ಸಂಸದೀಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ಹೇಳಿದೆ.

ವಾಸ್ತವವಾಗಿ, 20-24 ವಾರಗಳ ಭ್ರೂಣದ ಗರ್ಭಪಾತಕ್ಕೆ ವಿಧವೆ ಅಥವಾ ವಿಚ್ಛೇದಿತ ಮಹಿಳೆಗೂ ಅನುಮತಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಹೈಕೋರ್ಟ್ ಅನಪೇಕ್ಷಿತ ದೃಷ್ಟಿಕೋನ ಹೊಂದಿದೆ ಎಂದಿರುವ ಸುಪ್ರೀಂ ಕೋರ್ಟ್, ಈ ಕಾನೂನು ನಿಯಮಗಳ ವ್ಯಾಖ್ಯಾನ ಕುರಿತು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

Join Whatsapp
Exit mobile version