ಮಂಗಳೂರು: ಮುಸ್ಲಿಮ್ ಆಟೋ ಚಾಲಕನೊಬ್ಬನಿಗೆ ಸಂಘಪರಿವಾರದ ಕಾರ್ಯಕರ್ತ ಸೇರಿ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಭಾನುವಾರ ತೊಕ್ಕೊಟ್ಟು ಬಳಿ ನಡೆದಿದೆ.
ಖಾಸಗಿ ಬಸ್ ನಿರ್ವಾಹಕ ಯಶ್ಚಿತ್ ಹಾಗೂ ಇತರ ಇಬ್ಬರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ಇಬ್ರಾಹೀಂ ಹರ್ಷದ್ (31) ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭಾನುವಾರ ಮಧ್ಯಾಹ್ನ ಇಬ್ರಾಹೀಂ ಅವರು ತೊಕ್ಕೊಟ್ಟು ಆಟೋ ರಿಕ್ಷಾ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಹೊರಡುತ್ತಿದ್ದಾಗ ರಿಕ್ಷಾಗೆ ಅಡ್ಡ ಬಂದ ಯಶ್ಚಿತ್, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ. ಬಳಿಕ ಇಬ್ರಾಹೀಂ ಅವರು ಪ್ರಯಾಣಿಕನನ್ನು ಬಿಟ್ಟು ಬರುವಾಗ ಮಾಯಾ ಬಾರ್ ಬಳಿ ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪರಿಣಾಮ ಇಬ್ರಾಹೀಂ ಅವರ ಕತ್ತು ಸೇರಿದಂತೆ ಇತರೆಡೆ ತರಚಿದ ಗಾಯಗಳಾಗಿವೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇಬ್ರಾಹೀಂ ಅವರು ಉಳ್ಳಾಲ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.