ಧಾರವಾಡ: ‘ಕಾವಿ ಪಾಲಿಟಿಕ್ಸ್’ ಸಕ್ರಿಯವಾಗಿರುವ ಈ ಸಮಯದಲ್ಲಿ ‘ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು ರಾಜಕಾರಣ ಮಾಡಬಾರದು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂದು ಇತ್ತೀಚೆಗಷ್ಟೇ ಸ್ವಾಮೀಜಿ ಒಬ್ಬರು ಹೇಳಿದ್ದು, ಈ ಹಿನ್ನೆಲೆ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ನಿಜಗುಣಾನಂದ ಸ್ವಾಮೀಜಿ, ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು ಎಂದಿದ್ದಾರೆ.
ನಮ್ಮದೇನಿದ್ದರೂ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರದ ವಿಚಾರಧಾರೆ ಮಾತ್ರ ಇರಬೇಕಿದೆ. ಈಗ ಎಲ್ಲ ಸಮುದಾಯ ಸಂಕೀರ್ಣದಿಂದ ಹೊರ ಬಂದಿವೆ. ಮಠಾಧೀಶರು ರಾಜಕಾರಣದಲ್ಲಿ ಇದ್ದಾರೆ ಎಂಬ ವಿಚಾರವು ಒಂದು ಕಡೆ ಆಗಿದ್ರೆ, ಮಾಧ್ಯಮಗಳೂ ರಾಜಕಾರಣದ ವರ್ಗದಲ್ಲಿದೆ. ಅವುಗಳು ಕೂಡ ರಾಜಕಾರಣ ಹೊರತುಪಡಿಸಿ ನಿಂತಿಲ್ಲ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.
ಮಠಾಧೀಶರು ರಾಜಕಾರಣದಲ್ಲಿ ಬರಬಾರದು ಎನ್ನುವುದು ಸತ್ಯ. ಧರ್ಮ, ರಾಜಕಾರಣದಲ್ಲಿ ಪ್ರವೇಶ ಮಾಡಬಾರದು. ಕೇವಲ ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ & ಪಾದ್ರಿ ಕೂಡ ರಾಜಕಾರಣದಲ್ಲಿ ಪ್ರವೇಶ ಆಗಬಾರದು. ಯಾವ ಧರ್ಮದ ನೇತಾರ ಕೂಡ ರಾಜಕಾರಣ ಪ್ರವೇಶ ಮಾಡಬಾರದು. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿಯ ಹೇಳಬಹುದು ಹಾಗೂ ಮಾರ್ಗದರ್ಶನ ಮಾಡಬಹುದು ಎಂದಿದ್ದಾರೆ.
ಒಬ್ಬ ಸ್ವಾಮೀಜಿನ ಬಳಸಿಕೊಳ್ಳುವಾಗ, ರಾಜಕಾರಣಿಗಳು ಎಚ್ಚರಿಕೆಯಿಂದ ಇರಲಿ. ಧಾರ್ಮಿಕ ಕಾರ್ಯಕ್ಕೆ ಮಾತ್ರ ಬಳಸಿಕೊಳ್ಳಲಿ. ರಾಜಕಾರಣಿಗಳು ಸ್ವಾಮೀಜಿಗಳನ್ನ ಬೇರೆ ಯಾವ್ದೆ ಕೆಲಸಕ್ಕೆ ಬಳಸುವಾಗ ಸ್ವಾಮೀಜಿಗಳೂ ಎಚ್ಚರಿಕೆಯಿಂದ ಇರಬೇಕಿದೆ ಎಂದು ಸಲಹೆ ನೀಡಿದರು. ಹೀಗೆ ಧಾರ್ಮಿಕ ಮುಖಂಡರು ಮತ್ತು ಸ್ವಾಮೀಜಿಗಳು ರಾಜಕೀಯದಿಂದ ದೂರ ಇರಬೇಕು ಎಂಬ ಸಲಹೆಯನ್ನು ನಿಜಗುಣಾನಂದ ಸ್ವಾಮೀಜಿ ನೀಡಿದ್ದಾರೆ.