ಬೆಂಗಳೂರು: ಅಧಿಕಾರಿಗಳನ್ನು ತಾತ್ಕಾಲಿಕವಾಗಿ ವರ್ಗಾವಣೆ, ಮರುವರ್ಗಾವಣೆ ಮಾಡುವ ಮೂಲಕ ಚುನಾವಣಾ ಆಯೋಗ ಹೊರಡಿಸಿರುವ ವರ್ಗಾವಣೆ ನೀತಿಯ ಆಶಯಕ್ಕೆ ಧಕ್ಕೆಯಾಗುವಂತೆ ರಾಜ್ಯ ಸರ್ಕಾರದ ಕುತಂತ್ರ ಮಾರ್ಗ ಅನುಸರಿಸುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮನವಿ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, “ಅಕ್ರಮಗಳನ್ನು ತಡಯುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗಷ್ಟೇ ವರ್ಗಾವಣೆ ನೀತಿಯನ್ನು ಪ್ರಕಟಿಸಿದೆ. ಇದರ ಅನ್ವಯ ಒಂದೇ ಜಿಲ್ಲೆಯಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಚುನಾವಣೆಯೊಂದಿಗೆ ನೇರ ಸಂಪರ್ಕ ಹೊಂದಿರುವ ಅಧಿಕಾರಿಗಳು ಬೇರೆ ಜಿಲ್ಲೆಗೆ ವರ್ಗಾವಣೆ ಆಗಬೇಕಿರುತ್ತದೆ. ಆದರೆ ರಾಜ್ಯ ಸರ್ಕಾರವು ಕುತಂತ್ರ ಮಾರ್ಗ ಅನುಸರಿಸಿ, ವರ್ಗಾವಣೆ ನೀತಿಯ ಆಶಯವನ್ನೇ ಬುಡಮೇಲೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ” ಎಂದು ಹೇಳಿದರು.
“ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ತಾತ್ಕಾಲಿಕವಾಗಿ ವರ್ಗಾಯಿಸಿ, ಮತ್ತೆ ಮೊದಲಿದ್ದ ಜಿಲ್ಲೆಗೆ ಮರುವರ್ಗಾವಣೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಮೂಲಕ ಅವರು ಮೂರು ವರ್ಷದಿಂದ ಒಂದೇ ಕಡೆ ಇಲ್ಲವೆಂದು ಸಾಬೀತುಪಡಿಸಿ, ಅವರನ್ನು ಮೊದಲಿದ್ದ ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಸರ್ಕಾರ ಮುಂದಾಗುತ್ತಿದೆ. ಸರ್ಕಾರದ ಇಂತಹ ಕುತಂತ್ರ ಮಾರ್ಗದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ” ಎಂದು ಪೃಥ್ವಿ ರೆಡ್ಡಿ ತಿಳಿಸಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, “ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿಗೆ ಸಂಬಂಧಿಸಿ ಬಿಜೆಪಿಯು ಅಕ್ರಮ ನಡೆಸಿರುವುದು ತನಿಖೆಯಿಂದ ಸಾಬೀತಾಗುವ ಹಂತದಲ್ಲಿದೆ. ಹಣಬಲ, ತೋಳ್ಬಲ, ಅಧಿಕಾರಬಲ ಬಳಸಿಕೊಂಡು ಕೂಡ ಬಿಜೆಪಿ ಹಲವು ರೀತಿಯ ಅಕ್ರಮ ನಡೆಸುತ್ತದೆ. ಇಷ್ಟೆಲ್ಲ ಮಾಡಿಯೂ ಚುನಾವಣೆಯಲ್ಲಿ ಸೋತರೆ, ಆಪರೇಷನ್ ಕಮಲವೆಂದು ಮತ್ತೊಂದು ಅಕ್ರಮವನ್ನು ಬಿಜೆಪಿ ಮಾಡುತ್ತದೆ. ಈಗ ಇವುಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ, ಬಿಜೆಪಿ ಸರ್ಕಾರವು ವರ್ಗಾವಣೆಯಲ್ಲಿ ಅಕ್ರಮ ಮಾಡುತ್ತಿದೆ” ಎಂದು ಹೇಳಿದರು.
ಪಕ್ಷದ ಮುಖಂಡರಾದ ಬ್ರಿಜೇಶ್ ಕಾಳಪ್ಪ, ಜಗದೀಶ್ ವಿ ಸದಂ, ಬಿ.ಟಿ.ನಾಗಣ್ಣ, ಚನ್ನಪ್ಪಗೌಡ ನೆಲ್ಲೂರು, ಸುರೇಶ್ ರಾಥೋಡ್ ಮತ್ತಿತರರು ಭಾಗವಹಿಸಿದ್ದರು.