►ಬಿಡುಗಡೆಗೆ ನಿರಂತರ ಶ್ರಮಿಸಿದ ಅರುಣ್, ಮಂಗಳೂರಿನ ಕಬೀರ್
ಕಡಬ:ಮಾಡದ ತಪ್ಪಿಗೆ 11 ತಿಂಗಳುಗಳ ಕಾಲ ರಿಯಾದ್ ನಲ್ಲಿ ಜೈಲು ಶಿಕ್ಷೆಗೆ ಒಳಗಾದ ಕಡಬದ ಅಮಾಯಕ ಯುವಕ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದು, ಸೋಮವಾರ (ನ. 20) ಸ್ವದೇಶಕ್ಕೆ ಆಗಮಿಸಲಿದ್ದಾರೆ.
ತಾನು ಉದ್ಯೋಗ ಮಾಡುತ್ತಿದ್ದ ಸಂಸ್ಥೆಯಲ್ಲಿ ಪದೋನ್ನತಿ ಹೊಂದಿ ಸೌದಿ ಅರೇಬಿಯಾದ ರಿಯಾದ್ ಗೆ ತೆರಳಿದ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಅಲ್ಲಿ ಜೈಲುಪಾಲಾಗಿದ್ದರು. 11 ತಿಂಗಳು ಸೆರೆವಾಸ ಅನುಭವಿಸಿದ ಬಳಿಕ ಇದೀಗ ರಿಯಾದ್ ನ ಪೊಲೀಸರು ಚಂದ್ರಶೇಖರ್ ಅವರನ್ನು ವಿಮಾನ ದಲ್ಲಿ ಮುಂಬಯಿಗೆ ಕಳುಹಿಸಲಿದ್ದು ಅಲ್ಲಿಂದ ಅವರು ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಶೇಖರ್ ಅಲ್ಲಿನ ಕೋರ್ಟ್ ಆದೇಶದಂತೆ ದಂಡ ಪಾವತಿಸಿದ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಅದನ್ನು ತೆರೆದು ಚಂದ್ರಶೇಖರ್ ನೋಡಿದ್ದರು. 2 ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್ ಬಗ್ಗೆ ಮಾಹಿತಿ ಕೇಳಲಾಗಿತ್ತು. ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.
ಚಂದ್ರಶೇಖರ್ ಬಿಡುಗಡೆಗೆ ಮಡಿಕೇರಿಯ ಬಿ ಆರ್ ಅರುಣ್ ಕುಮಾರ್ ಹಾಗೂ ಮಂಗಳೂರಿನ ಕಬೀರ್ ನಿರಂತರ ಶ್ರಮಿಸಿದ್ದರು.