ಬೆಂಗಳೂರು: ಕಳೆದ ಸೋಮವಾರ ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಫ್ಲೆಕ್ಸ್’ಗಳ ತೆರವಿಗೆ ಬಿಬಿಎಂಪಿ ಒಂದು ವಾರಗಳ ಕಾಲಾವಕಾಶ ನೀಡಿದೆ. ಇದೀಗಾಗಲೇ ಪಾಲಿಕೆ 16000ಕ್ಕೂ ಹೆಚ್ಚು ಫ್ಲೆಕ್ಸ್’ಗಳನ್ನು ತೆರವುಗೊಳಿಸಿದ್ದು, ಇನ್ನುಳಿದ ಬ್ಯಾನರ್ ಗಳನ್ನು ಒಂದು ವಾರದ ಒಳಗೆ ತೆರವುಗೊಳಿಸದಿದ್ದಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದೆ.
ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ‘ಹೈಕೋರ್ಟ್ ಆದೇಶದನ್ವಯ ಫ್ಲೆಕ್ಸ್ ಅಳವಡಿಕೆ ನಿಷೇಧ, ಆದರೆ ಅನಿವಾರ್ಯ ಸಂದರ್ಭದಲ್ಲಿ ವಿನಾಯಿತಿ ನೀಡಬೇಕಾಗುತ್ತದೆ. ತೆರವುಗೊಳಿಸಬೇಕು ಎಂದು ಜೂನ್ 18ರಂದೇ ಆದೇಶ ಹೊರಡಿಸಿದ್ದೇವೆ. ಒಂದು ವಾರದಲ್ಲಿ ತೆರವುಗೊಳಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.
ಫ್ಲೆಕ್ಸ್ ಅಳವಡಿಸಿರುವವರ ವಿರುದ್ಧ ಏಕಾಏಕಿ ಪ್ರಕರಣ ದಾಖಲಿಸುವ ಬದಲು ಸಮಯಾವಕಾಶ ನೀಡಿದ್ದೇವೆ, ಪ್ರಧಾನಿ ಬಂದಿದ್ದ ಕಾರ್ಯಕ್ರಮ ಎಂಬ ಕಾರಣಕ್ಕೆ ಫ್ಲೆಕ್ಸ್ ಹಾಕಲು ಪಾಲಿಕೆ ಯಾರಿಗೂ ಅನುಮತಿ ನೀಡಿಲ್ಲ, ಇದೀಗ ಕಾಲಾವಕಾಶ ನೀಡಿದ್ಧೇವೆ, ತೆರವುಗೊಳಿಸದೇ ಇದ್ದಲ್ಲಿ ಅದರಲ್ಲಿರುವ ಹೆಸರುಗಳನ್ನು ಆಧರಿಸಿ ಪ್ರಕರಣ ದಾಖಲಿಸುತ್ತೇವೆ’ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.