ಕೊನೆಗೂ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು ಮಂಜೂರು
ಗುವಾಹಟಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸುವುದನ್ನು ಸರಳವಾಗಿ ಕಾಣಲಾಗದು ಎಂದು ಸೆಷನ್ ಕೋರ್ಟ್ ನ ನ್ಯಾಯಮೂರ್ತಿ ಅಪರೇಶ್ ಚಕ್ರವರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಗುಜರಾತ್ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರನ್ನು ಸಿಲುಕಿಸಲು ಪ್ರಯತ್ನಿಸಿದ ಅಸ್ಸಾಮ್ ಪೊಲೀಸರ ನಡೆಯನ್ನು ನ್ಯಾಯಾಲಯ ಕಟು ಶಬ್ದಗಳಿಂದ ಟೀಕಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಕ್ರವರ್ತಿ, ಎಫ್.ಐ.ಆರ್ ಗೆ ವ್ಯತಿರಿಕ್ತವಾಗಿ ಮಹಿಳಾ ಪೊಲೀಸ್ ಅಧಿಕಾರಿ ಕಲಿತಾ ಮ್ಯಾಜಿಸ್ಟ್ರೇಟ್ ಎದುರು ವಿಭಿನ್ನ ಕಥೆಯನ್ನು ಸೃಷ್ಟಿಸಿದ್ದಾರೆ. ಮಹಿಳೆಯ ಸಾಕ್ಷ್ಯದ ಆಧಾರದಲ್ಲಿ ಆರೋಪಿ ಜಿಗ್ನೇಶ್ ಮೇವಾನಿಯನ್ನು ದೀರ್ಘಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡಲು ಕಾನೂನು ದುರುಪಯೋಗಪಡಿಸಿಕೊಂಡು ಪ್ರಕರಣವನ್ನು ಸೃಷ್ಟಿಸಲಾಗಿರುವ ಕುರಿತು ನ್ಯಾಯಾಲಯದ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಜಿಗ್ನೇಶ್ ಮೇವಾನಿ ಅವರಿಗೆ ಜಾಮೀನು ಮಂಜೂರು ಆದೇಶದ ವೇಳೆ ಪ್ರತಿಕ್ರಿಯಿಸಿದ ಬಾರ್ಪೇಟಾ ಸೆಷನ್ಸ್ ನ್ಯಾಯಾಲಯ, ಅಸ್ಸಾಮ್ ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯದ ವಿರುದ್ಧ ಸ್ವಯಂ ಪ್ರೇರಿತವಾಗಿ ಅರ್ಜಿಯನ್ನು ಸ್ವೀಕರಿಸುವಂತೆ ಅಸ್ಸಾಮ್ ಹೈಕೋರ್ಟ್ ಗೆ ಮನವಿ ಮಾಡಿದೆ.
ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಗ್ನೇಶ್ ಮೇವಾನಿ, ಮಹಿಳೆಯನ್ನು ಬಳಸಿಕೊಂಡು ತನ್ನ ವಿರುದ್ಧ ಪ್ರಕರಣ ದಾಖಲಿಸಲು ಆಡಳಿತರೂಢ ಬಿಜೆಪಿಯು ಹೇಡಿತನದ ಕೆಲಸ ಮಾಡಿವೆ ಎಂದು ಗುಡುಗಿದ್ದಾರೆ.